ಬೆಂಗಳೂರು: ರಾಜ್ಯಾದ್ಯಂತ 6, 7 ಮತ್ತು 8ನೇ ಭೌತಿಕ ತರಗತಿ ಆರಂಭವಾಗಿದ್ದು, ನಗರದ ಜೆ.ಬಿ.ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಚಾಕೊಲೇಟ್ ಹಂಚುವ ಮೂಲಕ ಶಾಲೆಗೆ ಸ್ವಾಗತಿಸಿದರು.
ಇಂದಿನಿಂದ 6,78, ಈ ಮೂರು ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡು ಆರಂಭಿಸಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಕಡೆ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಕೇರಳ ಗಡಿ ಭಾಗದ ತಾಲೂಕುಗಳನ್ನು ಹೊರತುಪಡಿಸಿ ಉಳಿದೆಡೆ 6-8ನೇ ತರಗತಿಗಳನ್ನು ಶುರು ಮಾಡಲಾಗಿದೆ.
ಈಗಾಗಲೇ ಕೋವಿಡ್ ನಿಯಮಗಳನ್ನು ಪಾಲಿಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಇಂದು ಶಾಲೆಗಳಿಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದ್ದಾರೆ.
ನಂತರ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ಮಾತನಾಡಿದರು. ತರಗತಿಗಳನ್ನು ಮುಂದುವರಿಸುವ ಬಗ್ಗೆ ಪೋಷಕರ ಜತೆ ಚರ್ಚಿಸಿ, ಅಭಿಪ್ರಾಯ ಪಡೆದ ಬಳಿಕ ಮುಂದಿನ ದಿನಗಳಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನೂ ಸಹ 1ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ ಪ್ರಾಥಮಿಕ ಶಾಲೆ ಆರಂಭಿಸುವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಇನ್ನು, ಮಕ್ಕಳ ಭೌತಿಕ ತರಗತಿ ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಹೇಳಿದೆ. ಹೀಗಾಗಿ ಮಕ್ಕಳು ಶಾಲೆಗೆ ಬರುವ ಮುನ್ನ ಶಾಲೆಗೆ ಕಳುಹಿಸಲು ತಮ್ಮ ತಂದೆ-ತಾಯಿ ಒಪ್ಪಿಗೆ ನೀಡಿರುವ ಪತ್ರವನ್ನು ಕಡ್ಡಾಯವಾಗಿ ತರಬೇಕು.
ಪ್ರತಿ ತರಗತಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಂಡ ರಚನೆ ಮಾಡಲಾಗುತ್ತದೆ. ಒಂದು ತಂಡದಲ್ಲಿ ಗರಿಷ್ಠ 20 ಮಕ್ಕಳು ಇರುವಂತೆ ಸೂಚನೆ ನೀಡಲಾಗಿದೆ ಎಂದರು.
ವಾರದಲ್ಲಿ ಐದು ದಿನ ತರಗತಿಗಳು ನಡೆಯಲಿದ್ದು, ದಿನ ಬಿಟ್ಟು ದಿನ ಆನ್ಲೈನ್ ಹಾಗೂ ಆಫ್ಲೈನ್ ತರಗತಿಗಳು ಜರುಗಲಿದೆ. ಮಕ್ಕಳು ಎರಡರಲ್ಲಿ ಒಂದು ತರಗತಿಯನ್ನು ಕಡ್ಡಾಯವಾಗಿ ಕೇಳಬೇಕು. ಹಾಜರಾತಿಯೂ ಕಡ್ಡಾಯವಾಗಿರುತ್ತದೆ.
ಈಗಾಗಲೇ ಮೊದಲ ಹಂತದಲ್ಲಿ 9-12ನೇ ತರಗತಿಗಳನ್ನು ಆರಂಭಿಸಲಾಗಿದ್ದು, ಆಗಸ್ಟ್ 23ರಿಂದ ಶಾಲೆಗಳು ಶುರುವಾಗಿವೆ. ಇನ್ನೂ 1-5ನೇ ತರಗತಿ ಆರಂಭವಾಗಿಲ್ಲ. ಎರಡನೇ ಹಂತದ ಶಾಲೆ ಓಪನ್ ಬೆನ್ನಲ್ಲೇ, 1 ರಿಂದ 5 ನೇ ತರಗತಿ ಪ್ರಾರಂಭಕ್ಕೆ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶಾಲೆ ಆರಂಭಿಸುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ.