ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿದೆ, ಎಲ್ಲೆಲ್ಲಿ ಏನೇನು ಆಗಿದೆ, ಆಸ್ತಿಪಾಸ್ತಿ, ಜನರಿಗೆ ಆಗಿರುವ ಸಂಕಷ್ಟ, ನಷ್ಟ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ, ನನ್ನ ಜೊತೆ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಇದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದು ಬೆಳಗಾವಿಯ ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆಯೊಳಗೆ ಹೈಕಮಾಂಡ್ ನಿಂದ ಅಧಿಕಾರ ಕುರಿತು ಸಂದೇಶ ಬರಬಹುದು, ಆ ಸಂದೇಶ ಬಂದ ಕೂಡಲೇ ನಿಮಗೂ ತಿಳಿಸುತ್ತೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿಮಾನ ನಿಲ್ದಾಣದಿಂದ ನೇರವಾಗಿ ಹೋಗಿದ್ದು ಹುಕ್ಕೇರಿ ತಾಲೂಕಿನ ಸಂಕೇಶ್ವರಕ್ಕೆ. ಹಿರಣ್ಯಕೇಶಿ ನದಿಯಲ್ಲಿ ನೀರು ಉಕ್ಕಿ ಹರಿದಿದ್ದರಿಂದ ತೀರದ ಸುಮಾರು 500 ಮನೆಗಳು ಮುಳುಗಡೆಗೊಂಡಿವೆ.
ಪ್ರತಿವರ್ಷ ಅತಿವೃಷ್ಟಿಯಾದಾಗ ಈ ರೀತಿ ನೀರು ನುಗ್ಗುವುದರಿಂದ ಇಲ್ಲಿನ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಪ್ಪರಗಿ ಜಲಾಶಯದ ನೀರಿನ ಮಟ್ಟ ಇಂದು 3.20 ಲಕ್ಷ ಕ್ಯೂಸೆಕ್ಸ್ ಮೀರಿದೆ. ಒಳ ಹರಿವು 3.20 ಲಕ್ಷ ಕ್ಯೂಸೆಕ್ಸ್ ಆಗಿದ್ದು ಹೊರ ಹರಿವು 3.19 ಲಕ್ಷ ಕ್ಯೂಸೆಕ್ಸ್ ಆಗಿದೆ.
ದೇವರ ದಯೆಯಿಂದ ಇಂದು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಹೆಚ್ಚು ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾಯಂಕಾಲ ವಾಪಸ್ಸಾಗುತ್ತೇವೆ ಎಂದರು.
ಹೈಕಮಾಂಡ್ ನಿಂದ ಸಂದೇಶ ಬಂದ ಮೇಲೆ: ಹೈಕಮಾಂಡ್ ನಿಂದ ಸಂದೇಶ ಬಂದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ಎರಡು ವರ್ಷಗಳ ಆಡಳಿತ ತೃಪ್ತಿ ನೀಡಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಜನರಿಗೆ ನನ್ನ ಆಡಳಿತ ತೃಪ್ತಿ ನೀಡಿದರೆ ಆಯಿತು ಎಂದರು.
ದಲಿತ ನಾಯಕ ಸಿಎಂ ಆಗಲಿದ್ದಾರೆಯೇ ಎಂದು ಕೇಳಿದ್ದಕ್ಕೆ ಮುಂದಿನ ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡುವುದು ನಾನಲ್ಲ, ಹೈಕಮಾಂಡ್, ಸ್ವಾಮೀಜಿಗಳು ಕೂಡ ನನ್ನ ಪರ ಸಮಾವೇಶ ಮಾಡುವ ಅಗತ್ಯವಿಲ್ಲ ಎಂದರು.
ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಾಧ್ಯಕ್ಷ ನಡ್ಡಾ ಅವರ ಮೇಲೆ ನನಗೆ ನಂಬಿಕೆಯಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ಸ್ಟಿಂಗ್ ಆಪರೇಶನ್ ವಿಚಾರವಾಗಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ವಾಸ್ತವ ಸ್ಥಿತಿಗತಿಗಳನ್ನು ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ನಾಳೆ ಬಿಎಸ್ ವೈ ಅಧಿಕಾರ ಅಂತ್ಯ?: ಇಂದು ಮುಖ್ಯಮಂತ್ರಿಗಳ ಮಾತಿನ ವರಸೆ ನೋಡಿದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅವರ ಮುಖ್ಯಮಂತ್ರಿ ಅಧಿಕಾರಾವಧಿ ಕೊನೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ನಾಳೆ ವಿಧಾನ ಸೌಧದಲ್ಲಿ ಕಾರ್ಯಕ್ರಮ: ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ನಾಳೆ ವಿಧಾನ ಸೌಧದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸಾಧನೆಯನ್ನು ತೋರಿಸುವ ಪುಸ್ತಕ ಬಿಡುಗಡೆಯಾಗಲಿದೆ.