ನ್ಯೂಡೆಲ್ಲಿ: ಅಮೆರಿಕ ರಾಜತಾಂತ್ರಿಕ ಅಧಿಕಾರಿ ತೈಪೆ ಭೇಟಿ ಮುಗಿಸಿದ ಬೆನ್ನಲ್ಲೇ ತೈವಾನ್, ಚೀನ ಹಾಕಿದ ಮಾರಣಾಂತಿಕ ಬೆದರಿಕೆಗೆ ತಿರುಗೇಟು ನೀಡಿದೆ. ಈ ಮೂಲಕ ಗುಟುರು ಹಾಕಿದೆ. ಬೀಜಿಂಗ್ ಎದುರು ಸೆಟೆದು ನಿಲ್ಲುವ ಮುನ್ಸೂಚನೆ ನೀಡಿದೆ.
ದೂರದ ಸ್ನೇಹಿತನೊಬ್ಬ ಔತಣಕ್ಕೆಂದು ಬಂದಾಗ ನೆರೆಮನೆಯವರು ಮಾರಣಾಂತಿಕ ಬೆದರಿಕೆ ಹಾಕಿದರೆ ಅದನ್ನು ಹೇಗೆ ನಿಭಾಯಿಸುವುದು? ಚೀನ ಏಕೆ ಈ ಬಗ್ಗೆ ಅಸಹನೆ ನಡೆ ಅನುಸರಿಸುತ್ತಿದೆ ಎಂದು ತೈವಾನ್ ಅಧ್ಯಕ್ಷೀಯ ಕಚೇರಿ ವಕ್ತಾರ ಖಾರವಾಗಿ ಪ್ರಶ್ನಿಸಿದ್ದಾರೆ.
ತೈವಾನ್ ಅಧ್ಯಕ್ಷ ತ್ಸಾಯ್ ಇಂಗ್- ವೆನ್, ಅಮೆರಿಕದ ಅಧಿಕಾರಿ ಜತೆ ಔತಣ ಕೂಟದ ವೇಳೆ ಗಾಢ ಸಂಬಂಧ ಕುರಿತು ಪ್ರತಿಜ್ಞೆ ಮಾಡಿದರು. ಇದು ಸ್ಪಷ್ಟವಾಗಿ ಬೆಂಕಿ ಜತೆಗಿನ ಸರಸ. ಚೀನದ ಪ್ರತ್ಯೇಕತಾ ವಿರೋಧಿ ಕಾನೂನಿನ ಉಲ್ಲಂಘನೆಯನ್ನು ಪ್ರಚೋದಿಸಿದ್ದೇ ಆದಲ್ಲಿ ತೈವಾನ್ ಮೇಲೆ ಯುದ್ಧವನ್ನೇ ಸಾರಬೇಕಾಗುತ್ತದೆ. ತ್ಸಾಯ್ ನಾಶವಾಗಲಿದ್ದಾರೆ ಎಂಬ “ಗ್ಲೋಬಲ್ ಟೈಮ್ಸ್’ನ ಹೇಳಿಕೆಗೆ ತೈವಾನ್ ಹೀಗೆ ಪ್ರತಿಕ್ರಿಯಿಸಿದೆ.
ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಕೀತ್ ಕ್ರಾಚ್ ಭೇಟಿ, ಅಮೆರಿಕ- ತೈವಾನ್ ಸಂಬಂಧವನ್ನು ಬಲಪಡಿಸಿದೆ. ಇಂಡೋ- ಪೆಸಿಫಿಕ್ ವಲಯದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ’ ಎಂದು ತೈವಾನ್ ಹೇಳಿದೆ. ಕ್ರಾಚ್ ಕೈಗೊಂಡಿದ್ದ 3 ದಿನಗಳ ತೈಪೆ ಪ್ರವಾಸದ ವೇಳೆ ಚೀನದ ಹಲವು ಯುದ್ಧ ವಿಮಾನಗಳು ತೈವಾನ್ ದ್ವೀಪಗಳ ಸಮೀಪ ಅಬ್ಬರಿಸಿದ್ದವು.