ವಿಜಯಪಥ ಸಮಗ್ರ ಸುದ್ದಿ
ನ್ಯೂಯಾರ್ಕ್: ಅಮೆರಿಕದ ಸಂಸತ್ ಮೇಲೆ ನಡೆದಿರುವ ದಾಳಿ ಕಾನೂನು ಬಾಹೀರ ಮತ್ತು ಹಿಂಸಾಚಾರ ಎಂಬುದು ಪ್ರಜಾಪ್ರಭುತ್ವದ ವಿರೋಧಿ ನಿಲುವು. ಹೀಗಾಗಿ ಈ ನಿಲುವನ್ನು ನಾವು ಖಂಡಿಸುತ್ತೇವೆ ಎಂದು ಅಲ್ಪಾಬೆಟ್ ಮತ್ತು ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಡೊನಾಲ್ಡ್ ಟ್ರಂಪ್ ವಿರುದ್ಧ 306-232ರಿಂದ ಅಂತರದಿಂದ ಜಯಗಳಿಸಿದ್ದಾರೆ. ಆದರೆ ಇದನ್ನು ಟ್ರಂಪ್ ಒಪ್ಪುತ್ತಿಲ್ಲ. ಹಾಗಾಗಿ ಟ್ರಂಪ್ ಬೆಂಬಲಿಗರು ಇಂದು ಸಂಸತ್ ಮೇಲೆ ದಾಳಿ ನಡೆಸಿದ್ದಾರೆ.
ಈ ಕುರಿತು ಖಂಡನೆ ವ್ಯಕ್ತಪಡಿಸಿರುವ ದೈತ್ಯ ಕಾರ್ಪೊರೇಟ್ ಕಂಪನಿಯಾದ ಗೂಗಲ್ನ ಸಿಇಒ ಸುಂದರ್ ಪಿಚೈ, ಮುಕ್ತ ಮತ್ತು ಸುರಕ್ಷಿತ ಚುನಾವಣೆಗಳನ್ನು ನಡೆಸುವುದು ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸುವುದು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಆಧಾರವಾಗಿದೆ. ಇದನ್ನು ಮಾಡುವಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ದೀರ್ಘ ಮತ್ತು ಹೆಮ್ಮೆಯ ಇತಿಹಾಸವಿದೆ. ಆದರೆ, ಅರಾಜಕತೆ ಮತ್ತು ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಶೋಭೆ ಅಲ್ಲ ಎಂದು ತಿಳಿಸಿದ್ದಾರೆ.
ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ಅದಕ್ಕಾಗಿ ಹಲವಾರು ಶಾಸಕರು ಸೇರಿದ್ದರು. ಈ ವೇಳೆ ಸಂಸತ್ ಹೊರಗಿದ್ದ ಟ್ರಂಪ್ ಬೆಂಬಲಿಗರು ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಇದರಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬೆನ್ನಿಗೆ ಸಾಕಷ್ಟು ಘಟನೆಗಳು ಸಂಭಂವಿಸುತ್ತಿವೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೆ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಅಲ್ಲದೆ, ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ತಿರುಚಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮವಾಗಿ ವಾಷಿಂಗ್ಟನ್‌ನ ಅಮೆರಿಕ ಸಂಸತ್ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅನಿರೀಕ್ಷಿತ ದಾಳಿ ನಡೆಸಿದ್ದು ಗಲಭೆ ಏರ್ಪಟ್ಟಿದೆ.
ಈ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮೃತಮಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಒಬ್ಬ ಮಹಿಳೆಯ ಭುಜಕ್ಕೆ ಗುಂಡು ತಗುಲಿದ್ದು, ರಕ್ತಸಿಕ್ತ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಿಗೆ ಡೊನಾಲ್ಡ್ ಟ್ರಂಪ್ ಅವರ ಅಸಂಬದ್ಧ ಹೇಳಿಕೆಗಳೇ ಗಲಭೆಗೆ ಕಾರಣ ಎಂದು ಫೇಸ್ಬುಕ್ ಮತ್ತು ಟ್ವಟರ್ ಅಮೆರಿಕ ಮಾಜಿ ಅಧ್ಯಕ್ಷ ಖಾತೆಯನ್ನೇ 12ಗಂಟೆವರೆಗೆ ನಿರ್ಬಂಧಿಸಿದೆ. ಅಲ್ಲದೆ, ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ತೆಗೆದುಹಾಕಿದೆ.
ಪ್ರಸ್ತುತ ಈ ಘಟನೆಗೆ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಶ್ವದ ಎಲ್ಲಾ ನಾಯಕರು ಈ ಘಟನೆಯನ್ನು ವಿರೋಧಿಸಿದ್ದಾರೆ.