ಕಲಬುರಗಿ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ ಎಂದು ರಂಭಾಪುರಿ ಪೀಠದ ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಹಂತದಲ್ಲಿ ಯಡಿಯೂರಪ್ಪ ಅವರನ್ನು ತೊಂದರೆಗೆ ಸಿಲುಕಿಸಿದರೆ ಮುಂದೆ ಪಕ್ಷ ಬೆಳೆಯುವುದು, ಅಧಿಕಾರಕ್ಕೆ ಬರುವುದಕ್ಕೆ ಕಷ್ಟ ಆಗುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ರಂಭಾಪುರಿ ಪೀಠ ಯಾವತ್ತೂ ರಾಜಕೀಯ ವಿಚಾರ ಮಾತಾಡುವುದಕ್ಕೆ ಇಚ್ಚಿಸುವುದಿಲ್ಲ. ಆದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರ ಕೊಡುಗೆ ಅಪಾರ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ 78 ವರ್ಷ ಆಗಿರುವ ಕಾರಣಕ್ಕೆ ಪಕ್ಷದ ಕೆಲವರು ವಯಸ್ಸಾಗಿದೆ ಎನ್ನುತ್ತಿದ್ದಾರೆ. ಅವರ ವಯಸ್ಸಿಗಿಂತಲೂ ಯಡಿಯೂರಪ್ಪ ಬಳಿ ಉತ್ಸಾಹ ಹೆಚ್ಚಾಗಿದೆ. ಈ ವಯಸ್ಸಿನಲ್ಲಿ ಕೂಡ ಇಡಿ ರಾಜ್ಯ ಸುತ್ತಾಡಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ವರ್ಗ ಮತ್ತು ಎಲ್ಲ ಸಮುದಾಯಗಳ ವಿಶ್ವಾಸವನ್ನು ಗಳಿಸಿದ್ದಾರೆ ಎಂದರು.
ಯಡಿಯೂರಪ್ಪನವರನ್ನು ಕಡೆಗಣಿಸಿದ್ದಕ್ಕಾಗಿ ಈ ಹಿಂದೆ ಒಂದು ಬಾರಿ ಬಿಜೆಪಿ ಪೆಟ್ಟು ತಿಂದಿದೆ. ಆದರೆ, ಇವತ್ತು ಎಲ್ಲವೂ ಸರಿ ಆಗಿದೆ. ಬಿಎಸ್‌ವೈ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕೇಂದ್ರದಲ್ಲೂ ಸಿಎಂ ಅನ್ನು ಬದಲಾಯಿಸುವುದಿಲ್ಲ ಎನಿಸುತ್ತಿದೆ. ಆದರೆ, ಪಕ್ಷದಲ್ಲಿ ಇರುವ ಕೆಲವು ವಿರೋಧಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ವಿಪಕ್ಷದವರಿಗೂ ಯಡಿಯೂರಪ್ಪ ಅವರ ಕಾರ್ಯವೈಖರಿ, ಶ್ರಮದ ಬಗ್ಗೆ ಗೊತ್ತಿದೆ. ಪಕ್ಷ ಬೇರೆ ಬೇರೆ ಆಗಿರಬಹುದು. ಅವರವರ ಪಕ್ಷದ ಕಾರ್ಯವಿಧಾನ ಬೇರೆ ಆಗಿರಬಹುದು. ಆದರೆ, ಯಡಿಯೂರಪ್ಪ ವೈಯಕ್ತಿಕವಾಗಿ ರಾಜ್ಯದ ಜನರ ಹಿತಕ್ಕಾಗಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಉಳಿದಿರುವ ಎರಡೂವರೆ ವರ್ಷದ ಅವಧಿಯನ್ನು ಸುಲಭವಾಗಿ ಪೂರ್ಣಗೊಳಿಸುವುದಕ್ಕೆ ಪಕ್ಷದ ವರಿಷ್ಠರು ಅವಕಾಶ ಕೊಡುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.