ಬೆಂಗಳೂರು: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಈ ನಡುವೆ ರಾಜ್ಯದಲ್ಲಿ ಎಲ್ಲಿಯೂ ಬಲವಂತದ ಬಂದ್ ಗೆ ಸರ್ಕಾರ ಅವಕಾಶ ಕೊಡಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕನ್ನಡ ಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಎಚ್ಚರಿಕೆಯ ನಡುವೆಯೂ ಹಲವಾರು ಕನ್ನಡಪರ ಸಂಘಟನೆಗಳು ರಾಜ್ಯದಲ್ಲಿ ಬಂದ್ ಮಾಡಲು ಸಂಪೂರ್ಣ ಸಜ್ಜಾಗಿವೆ. ಜತೆಗೆ ಯಾವುದೇ ಕಾರಣಕ್ಕೂ ಮರಾಠ ನಿಗಮ ಸ್ಥಾಪನೆ ಮಾಡುವುದು ಬೇಡ. ಅದನ್ನು ವಾಪಸ್ ಪಡೆಯಿರಿ. ನೀವು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಇನ್ನು ವಾಟಾಳ್‌ಪಕ್ಷದ ವಾಟಾಳ್ ನಾಗರಾಜ್ ಮಾತನಾಡಿ, ನಾಳೆ ರಾಜ್ಯ ಬಂದ್ ಇರುವುದರಿಂದ ಯಾವುದೇ ಬಸ್‌ಗಳನ್ನು ರಸ್ತೆಗೆ ಇಳಿಸಬೇಡಿ. ಒಂದು ವೇಳೆ ಬಸ್‌ಗಳನ್ನು ಬಿಟ್ಟರೆ ಶಾಂತಿ ಕದಡಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಸ್‌ಗಳನ್ನು ಬಿಡಬೇಡಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.
ಸಾ.ರಾ.ಗೋವಿಂದ್, ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಶಿವರಾಮೇಗೌಡ ಸೇರಿ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಬಂದ್‌ಗೆ ಕರೆ ನೀಡಿದ್ದು, ಎಲ್ಲೆಡೆ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಈ ನಡುವೆ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್ ಸಂಚಾರ ಮಾಡುವುದಕ್ಕೆ ಬಂದ್ ಎಫೆಕ್ಟ್ ನೋಡಿಕೊಂಡು ಆಯಾಯಾ ಘಟಕಗಳ ವ್ಯವಸ್ಥಾಪಕರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆಯಂತೆ.
ಇನ್ನು ಹೋರಾಟಕ್ಕೆ ಆಟೋ ಚಾಲಕ, ಮಾಲೀಕರ ಸಂಘಟನೆಗಳು, ಕ್ಯಾಬ್, ಓಲಾ, ಕಾರ್ಮಿಕ ಸಂಘಟನೆಗಳು ಸೇರಿ ಎಲ್ಲಾ ರೀತಿಯ ಸಂಘಟನೆಗಳು ಬಂದ್‌ಗೆ ಬೇಂಬಲ ಸೂಚಿಸಿವೆ.