NEWSನಮ್ಮರಾಜ್ಯರಾಜಕೀಯ

ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ ಸ್ಥಗಿತದ ವಿರುದ್ಧ ನಾಳೆ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಗೊಳಿಸಿದ ಮತ್ತು ತುಟ್ಟಿಭತ್ಯೆ ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜ.12ರಂದು (ಮಂಗಳವಾರ) ಪ್ರತಿಭಟನೆ ನಡೆಸಲಿದೆ.

ಕೊರೊನಾ ಸೋಂಕಿನ ನೆಪದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂಬ ಕಾರಣ ನೀಡಿ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಕಲೆ ಹಾಗೂ ಸಾಹಿತ್ಯ, ನಟನೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಹಲವಾರು ನಿಯಮಗಳನ್ನು ಹೇರಿರುವ ಸರ್ಕಾರದ ನೂತನ ನಿಯಮದ ವಿರುದ್ಧ ನಾಳೆ ಎಲ್ಲಾ ಸರ್ಕಾರಿ ನೌಕರರು ಪ್ರತಿಭಟನೆ ಮಾಡುವರು ಎಂದು ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಜೈ ಕುಮಾರ್ ಎಚ್.ಎಸ್. ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಕೂಡ, ಕೊರೊನಾದ ವಿಷಮ ಸಂದಿಗ್ದ ಪರಿಸ್ಥಿತಿಯ ನೆಪವೊಡ್ಡಿ ರಾಜ್ಯ ಸರ್ಕಾರ 2020ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಪಡಿಸಿತ್ತು. ಜತೆಗೆ 2020ರ ಜನವರಿಯಿಂದ 2021ರ ಜೂನ್ ವರೆಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿ ಈ ಅವಧಿಯ 18ತಿಂಗಳ ತುಟ್ಟಿ ಭತ್ಯೆ ಹೆಚ್ಚಳ ಮೊತ್ತದ ಹಿಂಬಾಕಿಯನ್ನು ಪಾವತಿಸುವುದಿಲ್ಲ ಎಂದು ಕಳೆದ ಮೇ 5 ರಂದು ಆದೇಶಿಸಿತ್ತು.

ರಾಜ್ಯ ಸರ್ಕಾರದಲ್ಲಿ ಈಗಾಗಲೇ 2.50ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇರುವ ಜವಾಬ್ದಾರಿಯೊಂದಿಗೆ ಹೆಚ್ಚುವರಿ ಕಾರ್ಯಗಳನ್ನೂ ಸಹ ಹಾಲಿ ಇರುವ ನೌಕರರೇ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಮಿತವ್ಯಯದ ನೆಪವೊಡ್ಡುತ್ತಲೇ ಅತ್ತ ಕಡೆ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದೆ. ಅವರಿಗೆ ಅವಶ್ಯವಿರುವ ಮನೆ, ವಾಹನ ಸೌಲಭ್ಯ, ಮನೆ ಬಾಡಿಗೆ ವೆಚ್ಚ, ದೂರವಾಣಿ, ವಿದ್ಯುತ್ ವೆಚ್ಚ ಇತ್ಯಾದಿ ವೆಚ್ಚಗಳಿಗೆ ನೂರಾರು ಕೋಟಿ ರೂ. ವ್ಯಯವಾಗುತ್ತಿದೆ.

ಅವಶ್ಯವಿಲ್ಲದಿದ್ದರೂ ಕೂಡ ನಿವೃತ್ತ ಅಧಿಕಾರಿಗಳ ನೇಮಕಗಳು ಎಲ್ಲೆಯಿಲ್ಲದೆ ಆಗುತ್ತಿವೆ. ಆರ್ಥಿಕ ಮಿತವ್ಯಯದ ಕ್ರಮಗಳನ್ನು ಈಗಾಗಲೇ ಬೆಲೆಯೇರಿಕೆಯ ಬಾಧೆಯಿಂದ ಬಳಲುತ್ತಿರುವ ನೌಕರರ ಮೇಲೆಯೇ ಏರುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದ್ದಾರೆ.

ತುಟ್ಟಿ ಭತ್ಯೆ ಎನ್ನುವುದು ನೌಕರರು, ಶಿಕ್ಷಕರು ಮತ್ತು ಪಿಂಚಣಿದಾರರನ್ನು “ಬೆಲೆಯೇರಿಕೆಯ ಬಾಧೆಯಿಂದ ರಕ್ಷಿಸಲು ಇರುವ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಪರಿಹಾರ”. ಜತೆಗೆ 6 ತಿಂಗಳಿಗೊಮ್ಮೆ ಸರ್ಕಾರ ನೀಡುತ್ತಿರುವ ಅಷ್ಟೋ ಇಷ್ಟೋ ತುಟ್ಟಿಭತ್ಯೆ ಪ್ರಮಾಣವು ಗಗನಕ್ಕೇರುತ್ತಿರುವ ಅತ್ಯವಶ್ಯ ವಸ್ತುಗಳ ಬೆಲೆಯೇರಿಕೆ ಸೂಚ್ಯಂಕಕ್ಕೆ ಅನುಗುಣವಾಗಿಯೇನೂ ಇಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸುತ್ತಾ, ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕೆಂದು ಹಾಗೂ 2021ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಮಧ್ಯಾಹ್ನ ಕಚೇರಿ ಊಟದ ಸಮಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಇನ್ನು ಸರ್ಕಾರದ ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ವೇತನ ಕಡಿತ ಮಾಡಿದ್ದನ್ನು ಒಪ್ಪಿಕೊಂಡಿದ್ದೆವು. 2020ರಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸಿತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಿದ್ದೆವು. ಆದರೀಗ ಸರ್ಕಾರ ಶೇ.65-70ರಷ್ಟು ಆದಾಯವನ್ನು ಗಳಿಸುತ್ತಿದೆ. ಈಗಲೂ ಗಳಿಕೆ ರಜೆ ನಗದೀಕರಣವನ್ನೇಕೆ ರದ್ದು ಮಾಡಬೇಕು ಎಂದು ಕಿಡಿಕಾರಿದ್ದಾರೆ.

ಈ ಸಂಬಂಧ ನಾಳೆ ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಆದೇಶ ಹಿಂಪಡೆಯುವಂತೆ ಮನವಿ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಲ್ಲಿ 3000ಕ್ಕೂ ಹೆಚ್ಚು ನೌಕರರು ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಕಡತಗಳ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದೇ ಆದರೆ, ಅದು ಎಲ್ಲಾ ಇಲಾಖೆ ಹಾಗೂ ಇಡೀ ರಾಜ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳಲಿದ್ದೇವೆ. ನೌಕರರ ಸಲಹೆ ಹಾಗೂ ನಿಯಮಗಳನ್ನು ಸರಿಪಡಿಸುವ ಕುರಿತು ಪ್ರತಿಕ್ರಿಯೆಗಳನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ