ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಿತ್ಯ ಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನ ಮುಟ್ಟುತ್ತಿದ್ದು ಸಾಮಾನ್ಯ ಜನರು ಒಪ್ಪೊತ್ತಿನ ಕೂಳಿಗಾಗಿ ಪರದಾಡುತ್ತಿದ್ದಾರೆ. ಈನಡುವೆ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಾಗುವ ಕಾಲ ಸನ್ನಿಹಿತವಾಗಿದ್ದು. ಈ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದರ ಬಿಸಿ ಮತ್ತಷ್ಟು ತಟ್ಟಲಿದೆ.
ಗುರುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶೇ. 18ರಷ್ಟು ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾಪ ಬಂದಿದ್ದು, ಸಿಎಂ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದರೆ ಬಸ್ ಟಿಕೆಟ್ ದರವನ್ನು ಇದೇ ಅಧಿವೇಶನದಲ್ಲಿ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಬಸ್ ಟಿಕೆಟ್ ದರ ಏರಿಕೆ ಮಾಡಬೇಕು ಎಂದು ನಾಲ್ಕು ನಿಗಮಗಳಿಂದ ಬೇಡಿಕೆ ಇದೆ. ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಈ ನಡುವೆ ಸಿಟಿ ಟ್ಯಾಕ್ಸಿಗಳಿಗೆ ಶೇ.15ರಷ್ಟು ಬಾಡಿಗೆ ದರ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಈಗ ಒಲಾ ಮತ್ತು ಊಬರ್‌ನವರು ಬಾಡಿಗೆ ದರ ಹೆಚ್ಚಸುವಂತೆ ಕೇಳುತ್ತಿದ್ದಾರೆ ಎಂದು ವಿವರಿಸಿದರು.
ದಿನದಿಂದ ದಿನಕ್ಕೆ ಡೀಸೆಲ್ ದರ ಏರಿಕೆಯಾಗುತ್ತಿರುವುದರಿಂದ ಬಸ್ ಟಿಕೆಟ್ ದರ ಏರಿಸುವುದು ಅನಿವಾರ್ಯ ಆಗುತ್ತಿದೆ ಎಂದ ಅವರು, ಕೊರೊನಾ ಪರಿಣಾಮ ಸಾರಿಗೆ ಇಲಾಖೆ 2,780 ಕೋಟಿ ರೂ. ನಷ್ಟ ಅನುಭವಿಸಿದೆ. ಆದಾಯದಲ್ಲಿ 4000 ಕೋಟಿ ರೂ. ಕೊರತೆಯಾಗಿದೆ. ಆದರೂ ನೌಕರರಿಗೆ ವೇತನ ಕೊಡಲಾಗಿದೆ. ಕೇವಲ ಲಾಭವನ್ನು ಗಮನದಲ್ಲಿ ಇಟ್ಟುಕೊಳ್ಳದೆ ಸಾರಿಗೆ ಇಲಾಖೆಯ ನೌಕರರ ಹಿತ ಕಾಪಾಡಲಾಗುತ್ತಿದೆ ಎಂದು ಸವದಿ ಹೇಳಿದರು.
ಇನ್ನೂ ಕರ್ನಾಟಕ ಸಾರಿಗೆ ನಿಗಮ ಹೊಸ ಆಯಾಮ ಶುರು ಮಾಡಲಿದೆ. ಸಾರಿಗೆ ಇಲಾಖೆ ಮುಖಾಂತರ ಕಾರ್ಗೋ ಮತ್ತು ಪಾರ್ಸೆಲ್ ಗಳನ್ನು ಆರಂಭಿಸಲಾಗುವುದು. ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಂದ ಈ ಸೇವೆ ಆರಂಭವಾಗಲಿದೆ. ಸೇವೆಯಿಂದ ಪ್ರತಿವರ್ಷ 80 ಕೋಟಿ ರೂ. ಲಾಭ ಬರುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 109 ಬಸ್ ನಿಲ್ದಾಣಗಳಲ್ಲಿ ಇದನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಸಾರಿಗೆ ಇಲಾಖೆ ನೌಕರರ 9 ಬೇಡಿಕೆ ಈಡೇರಿಸಲು ಬದ್ಧ. 9ರ ಪೈಕಿ ಈಗಾಗಲೇ ಆರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಉಳಿದ ಬೇಡಿಕೆಗಳ ಈಡೇರಿಕೆಗೆ ಸರಕಾರ ಕ್ರಮ ಕೈಗೊಳ್ಳಲಿದೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಸಾರಿಗೆ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ನನ್ನ ಹತ್ತಿರ ಬಂದು ಚರ್ಚೆ ಮಾಡಲಿ. ಸಾರಿಗೆ ನೌಕರರು ನಮ್ಮ ಕುಟುಂಬದವರು. ರೈತ ಸಂಘಟನೆ ಹಾಗೂ ಇತರ ಸಂಘಟನೆಗಳಿಗೆ ಇದರ ಸಂಬಂಧವಿಲ್ಲ ಎಂದು ಹೇಳಿದರು.
Saamanya manushyana sambhala or kooliyannu hechisi agadre