ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಏಪ್ರಿನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ನಾಲ್ಕೂ ನಿಗಮಗಳಲ್ಲಿ ವಜಾ, ಅಮಾನತು ಮತ್ತು ವರ್ಗಾವಣೆಗೊಂಡ ನೌಕಕರರ ಪ್ರಕರಣ ಶುಕ್ರವಾರ ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಸಾರಿಗೆ ನೌಕರರ ಪರ ವಕೀಲರು ಮತ್ತು ಕೆಎಸ್‌ಆರ್‌ಟಿಸಿ ಪರ ವಕೀಲರು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಸುರಜ್ ಗೋವಿಂದರಾಜ್ ಅವರ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
ಈ ಸಂದರ್ಭದಲ್ಲಿ ನೌಕರರ ಪರ ವಕೀಲರಾದ ಎಚ್.ಬಿ.ಶಿವರಾಜು, ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ ಸಾರಿಗೆ ಮೇಲ್ಮನೆ ಪ್ರಾಧಿಕಾರಕ್ಕೆ ವಜಾಗೊಂಡ ಎಲ್ಲ ನೌಕರರು ಅರ್ಜಿ ಸಲ್ಲಿಸಿ ಎಂದು ಹೇಳಿತ್ತು. ಅದರಂತೆ ಎಲ್ಲ ನೌಕರರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ ಪ್ರಾಧಿಕಾರ ಅರ್ಜಿ ಸಲ್ಲಿಸಿದ್ದ ಎಲ್ಲ ನೌಕರರ ಅರ್ಜಿಗಳನ್ನು ತಿರಸ್ಕರಿಸಿದೆ. ಇನ್ನು ಮುಷ್ಕರದ ವೇಳೆ ವಜಾಗೊಳಿಸಿದ್ದ 284 ತರಬೇತಿ ನೌಕರರ ವಜಾ ಆದೇಶವನ್ನು ಸಂಸ್ಥೆ ಹಿಂಪಡೆದಿತ್ತು. ಆದರೆ ಮತ್ತೆ 20 ನಿಮಿಷದಲ್ಲೇ ವಾಪಸ್ ಪಡೆದುಕೊಂಡಿದೆ. ಯಾವ ಆಧಾರದ ಮೇಲೆ ಈ ನಡೆಯನ್ನು ಸಾರಿಗೆ ನಿಗಮಗಳು ಮತ್ತು ಪ್ರಾಧಿಕಾರ ಅನುಸರಿಸುತ್ತಿದೆ ಎಂದು ತಮ್ಮ ವಾದ ಮಂಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠ ಸಾರಿಗೆ ಮೇಲ್ಮನವಿ ಪ್ರಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ಅಷ್ಟೂ ನೌಕರರ ಅರ್ಜಿಗಳನ್ನು ಪರಿಶೀಲಿಸಿ ತಿರಸ್ಕರಿಸಿದ್ದೀರ ಎಂದರೆ ವಜಾಗೊಂಡ ಎಲ್ಲ ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲವೇ? ಒಂದು ವೇಳೆ ನೀವು ಎಷ್ಟು ನೌಕರರನ್ನು ವಜಾಗೊಳಿಸಿದ್ದೀರಿ ಮತ್ತೆ ಎಷ್ಟು ನೌಕರರ ವಜಾ ಆದೇಶವನ್ನು ಹಿಂಪಡೆದಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ನ್ಯಾಯಪೀಠ ಕೇಳಿತು.
ಅದಕ್ಕೆ ಕೆಎಸ್‌ಆರ್‌ಟಿಸಿ ಪರ ವಕೀಲರು ಮೇಲ್ಮನೆ ಪ್ರಾಧಿಕಾರದಲ್ಲಿ ಎಷ್ಟು ನೌಕರರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು ಮಾನ್ಯ ಮಾಡಲಾಗಿದೆ ಎಂಬ ಬಗ್ಗೆ ತಿಳಿಸಲು ಕಾಲವಕಾಶ ಕೊಡಿ ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ. ಆದರೆ ಯಾವ ದಿನಾಂಕಕ್ಕೆ ಇದೆ ಎಂಬ ಬಗ್ಗೆ ಇನ್ನೂ ಲಿಸ್ಟ್ ಆಗಿಲ್ಲ. ದಿನಾಂಕ ಪ್ರಕಟವಾದ ಕೂಡಲೇ ವಿಜಯಪಥದಲ್ಲಿ ತಿಳಿಸಲಾಗುವುದು.
ನೌಕರರ ಪರ ವಕೀಲರಾದ ಶಿವರಾಜು ಹೇಳುವುದೇನು?
ಮುಷ್ಕರದ ವೇಳೆ ವಜಾಗೊಂಡ ಎಲ್ಲ ನೌಕರರು ಹೈ ಕೋರ್ಟ್ ಮುಖ್ಯನ್ಯಾಯಾಧೀಶರ ಪೀಠದ ಸೂಚನೆ ಮೇರೆಗೆ ಸಾರಿಗೆ ಮೇಲ್ಮನೆ ಪ್ರಧಾಕಾರಕ್ಕೆ ವಜಾ ಅದೇಶ ಹಿಂಡೆಯುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಮೇಲ್ಮನೆ ಪ್ರಾಧಿಕಾರ ಅಷ್ಟೂ ನೌಕರರ ಅರ್ಜಿಯನ್ನು ಏಕಾಏಕಿ ತಿರಸ್ಕರಿಸಿದೆ.
ಅಂದರೆ ಆ ನೌಕರರೆಲ್ಲರೂ ಮತ್ತೆ ಕರ್ತವ್ಯಕ್ಕೆ ಮರಳಲು ಅರ್ಹರಲ್ಲವೇ? ಪ್ರಾಧಿಕಾರ ಮತ್ತು ಸಾರಿಗೆಯ ನಾಲ್ಕೂ ನಿಗಮಗಳು ನೌಕರರ ಬಗ್ಗೆ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ನೌಕರರ ಪರ ವಕೀಲರಾದ ಶಿವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದಿನ ವಿಚಾರಣೆ ವೇಳೆಗೆ ವಜಾಗೊಂಡ ನೌಕರರಲ್ಲಿ ಹಲವು ನೌಕರರ ವಜಾ ಆದೇಶವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಬಹುದು ಎಂಬ ನಂಬಿಕೆ ಇದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲ ನೌಕರರಿಗೂ ನೂನುನಾತ್ಮಕವಾಗಿ ಒಳ್ಳೆಯ ಸುದ್ದಿ ಸಿಗುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.