ಹರಪನಹಳ್ಳಿ: ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದ ಹೆಡ್‌ಕಾನ್ಸ್ಟೆಬಲ್ (45) ಒಬ್ಬರು ಇಂದು ಮೃತಪಟ್ಟಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಅರಸೀಕೆರೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಜೂನ್ 18 ರಂದು ಠಾಣೆಯ ಸಿಬ್ಬಂದಿ ಜತೆ ತೆರಳಿ ಬಳ್ಳಾರಿ ಜಿಂದಾಲ್ ಬೈಪಾಸ್ ನಲ್ಲಿ ಕರ್ತವ್ಯ ನಿರ್ವಹಿಸಿ ಜೂ. 24 ರಂದು ಅಲ್ಲಿನ ಕರ್ತವ್ಯದಿಂದ ಬಿಡುಗಡೆ ಹೊಂದಿ ಬಸ್ ಮೂಲಕ ಹರಪನಹಳ್ಳಿಗೆ ಬಂದಿದ್ದರು. ಆ ವೇಳೆ ಅವರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆಗ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ವೇಳೆ ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಬಳ್ಳಾರಿಯ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ದ್ದರಿಂದ ಜುಲೈ 10ರಂದು ಬಿಡುಗಡೆ ಹೊಂದಿ ವೈದ್ಯರ ಸಲಹೆ ಮೇರೆಗೆ ಸ್ವಗ್ರಾಮದಲ್ಲೇ ಕ್ವಾರಂಟೈನ್ ಆಗಿದ್ದರು.
ಜುಲೈ 21 ರಂದು ಪುನಃ ಮೈಕೈ ನೋವು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜು.23 ರಂದು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
ಕೋವಿಡ್ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ.