ಬೆಂಗಳೂರು: ಶ್ರೀಲಂಕಾಕ್ಕೆ ನಾವು ಹೋಗಿದ್ದು ನಿಜ, 2014ರ ಆ ವಿಷಯವನ್ನು ಈಗ ಜಮೀರ್ ಅಹ್ಮದ್ ಎಳೆದು ತರುತ್ತಿರುವುದು ಏತಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜಮೀರ್ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕದ್ದು ಮುಚ್ಚಿ ‘ಕೊಲಂಬೋ ಯಾತ್ರೆ’ ಮಾಡಿಲ್ಲ. ಆ ದುರಭ್ಯಾಸಗಳು ನನಗಿಲ್ಲ ಆದರೆ ಅದನ್ನು ಈತ ಪದೇಪದೆ ಎಳೆಯುತ್ತಿರುವುದು ಏಕೆ. ಎಲ್ಲೋ ತಲೆ ಕೆಟ್ಟಿರಬೇಕು ಅವನಿಗೆ. ಇದು ಹೀಗೆ ಮುಂದುವರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು..
ಅಂದು ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಪ್ರವಾಸ ಹೋಗಿದ್ದೆವು. ಈ ವೇಳೆ ನಮ್ಮ ಪಕ್ಷದಲ್ಲೇ ಜಮೀರ್ ಇದ್ದ. ಈಗ ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2014 ರ ಜೂನ್ ನಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಪ್ರವಾಸ ಹೋಗುವುದಾಗಿ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇಲ್ಲ ಎಂದು ತಿಳಿಸಿದ್ದಾರೆ.
ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಜಮೀರ್ ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಆತನೊಂದಿಗೆ ಹೋಗಿರಲಿಲ್ಲ ಎಂದು ಹೇಳಿದರು.