ವಿಜಯಪಥ ಸಮಗ್ರ ಸುದ್ದಿ
ರಾಮನಗರ: ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ದೂರು ವಾಪಸ್ ಪಡೆದಿದ್ದೇನೆ. ಐದು ಪುಟಗಳು ಸುದೀರ್ಘವಾಗಿ ಬರೆದಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರವಾಗಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನಕಪುರದಲ್ಲಿ ಮಾತನಾಡಿ, ದೂರು ವಾಪಸ್ ಪಡೆಯಲು ಹಲವಾರು ಕಾರಣಗಳಿವೆ. ವಿಚಾರಣೆಗೆ ಕರೆದರೆ ಮತ್ತೆ ಠಾಣೆಗೆ ಕಾನೂನಾತ್ಮಕವಾಗಿ ಹೋಗುತ್ತೇನೆ ಎಂದು ತಿಳಿಸಿದರು.
ಸುಮೊಟೊ ಕೇಸ್ ದಾಖಲು ಮಾಡುವುದು ತನಿಖಾಧಿಕಾರಿಗೆ ಬಿಟ್ಟಿದ್ದು, ಆದರೆ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲ ಎಂದು ಈ ಪ್ರಕರಣದ ನಂತರ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿದರು.
ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ. ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರಿಂದ, ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕು ಎಂಬುವುದು ಸೇರಿ ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
ಇನ್ನು ನನ್ನ ವಿರುದ್ಧ ಮಾತನಾಡುವವರು ಯಾರಾದರೂ ದಾಖಲೆಗಳನ್ನು ಇಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ. ಆದರೆ ಕೆಲವರು ತೆವಲಿಗೆ ಮಾತನಾಡುತ್ತಿದ್ದಾರೆ ಅಷ್ಟೇ, ಮಾತನಾಡೋದು ಸುಲಭ. ಆದರೆ ಮಾತಿನಂತೆ ಹೋರಾಟ ಮಾಡಲು ಕಷ್ಟ ಇದೆ. ತೆವಲಿಗೆ ಮಾತನಾಡಬಾರದು ಎಂದರು.
ಮಾಹಿತಿಗಳನ್ನು ಮಾತ್ರ ಅಧಿಕಾರಿಗಳಿಗೆ ಕೊಟ್ಟು ಸತ್ಯ ಇದ್ರೆ ತನಿಖೆ ಮಾಡಿ ಎಂದು ಹೇಳಿಕೆ ಕೊಟ್ಟಿದ್ದೇನೆ. ಇದರ ಜೊತೆಗೆ, ಪ್ರಕರಣದ ಹಿಂದೆ ಮಹಾನ್ ನಾಯಕರೊಬ್ಬರು ಹಿಂದಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ವಿಚಾರಕ್ಕೆ ಮಾತನಾಡಿ, ಯಾರು ಮಹಾ ನಾಯಕ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಘನತೆಗೆ ಧಕ್ಕೆಯಾದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ ಎಂದರು.
ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ. ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳುಹಿಸುವೆ ಎಂಬ ಜಾರಕಿಹೊಳಿ ಹೇಳಿಕೆಗೆ ಕಲ್ಲಹಳ್ಳಿ ಈ ರೀತಿ ಪ್ರತಿಕ್ರಿಯೆ ನೀಡಿದರು.