NEWSನಮ್ಮಜಿಲ್ಲೆನಮ್ಮರಾಜ್ಯಸಂಸ್ಕೃತಿ

ಅನುವಾದ ಸಾಹಿತ್ಯದ ಸಾಧಕಿ ವಿಜಯಾಶಂಕರ : ಬನ್ನೂರು ರಾಜು ಅಭಿಮತ

'ಕವಲುದಾರಿ' ಕಾದಂಬರಿ ಹಾಗೂ ' ಭೂತಾಯಿ ನಕ್ಕಾಗ ' ಕಥಾಸಂಕಲನ ಲೋಕಾರ್ಪಣೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು : ಭಾಷಾಂತರ ಸಾಹಿತ್ಯವೂ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 25ಕ್ಕೂ ಹೆಚ್ಚು ಬಹು ಮೌಲಿಕ ಕೃತಿಗಳನ್ನು ಬರೆದಿರುವ ಕಾದಂಬರಿಗಾರ್ತಿ ವಿಜಯಾಶಂಕರ ಅವರು ವಿಶೇಷವಾಗಿ ಅನುವಾದಿತ ಸಾಹಿತ್ಯ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರಾದರೂ ಇವರು ಭಾಷಾಂತರ ಸಾಹಿತ್ಯದ ಬಹು ದೊಡ್ಡ ಹೆಸರು ಎಂಬುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲವೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಅಗ್ರಹಾರದಲ್ಲಿರುವ ಅಕ್ಕನಬಳಗ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಆಯೋಜಿಸಿದ್ದ ಕಾದಂಬರಿಗಾರ್ತಿ ವಿಜಯಾಶಂಕರ ಅವರ ಅನುವಾದಿತ ಕೃತಿಗಳಾದ ‘ಕವಲುದಾರಿ’ ಕಾದಂಬರಿ ಹಾಗೂ ‘ ಭೂತಾಯಿ ನಕ್ಕಾಗ ‘ ಕಥಾಸಂಕಲನ ಪುಸ್ತಕಗಳ ಲೋಕಾರ್ಪಣೆ ಮತ್ತು ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಎರಡೂ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮಲ್ಲಿ ಬೇಕಾದಷ್ಟು ಮಂದಿ ಲೇಖಕಿಯರಿದ್ದರೂ ಕಾದಂಬರಿಗಾರ್ತಿ ವಿಜಯಾಶಂಕರ ಅವರಂತೆ ಒಂದು ಭಾಷಾ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಸಮರ್ಥವಾಗಿ ಅನುವಾದಿಸಬಲ್ಲ ಲೇಖಕಿಯರು ಬಹಳ ವಿರಳವೆಂದರು.

ಮೂಲತಹ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಯವರಾದ ವಿಜಯಾ ಶಂಕರ ಅವರ ಬದುಕು- ಬರಹದ ಕರ್ಮಭೂಮಿ ಸಾಂಸ್ಕೃತಿಕ ನಗರಿ ಮೈಸೂರು ನಗರವಾಗಿದ್ದು ಅವರು ತಮ್ಮ ಕೃತಿಗಳ ಮೂಲಕ ಇಲ್ಲಿನ ಕೀರ್ತಿಯನ್ನು ಬೆಳಗುತ್ತಿದ್ದಾರೆ.

ಕನ್ನಡ ಮತ್ತು ತೆಲುಗು ಉಭಯ ಭಾಷೆಗಳಲ್ಲೂ ಪಾಂಡಿತ್ಯ ಗಳಿಸಿರುವ ಇವರು ಕನ್ನಡದಿಂದ ತೆಲುಗಿಗೆ, ತೆಲುಗಿನಿಂದ ಕನ್ನಡಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಅನುವಾದಿಸಿ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಮೆರೆದಿದ್ದಾರೆ. ತನ್ಮೂಲಕ ಕನ್ನಡದ ಶ್ರೇಷ್ಠ ಲೇಖಕ -ಲೇಖಕಿಯರನ್ನು ತೆಲುಗಿಗೆ ಪರಿಚಯಿಸಿ, ಹಾಗೆಯೇ ತೆಲುಗಿನ ಅತ್ಯುತ್ತಮ ಬರಹಗಾರರನ್ನು ಕನ್ನಡಕ್ಕೆ ಪರಿಚಯಿಸಿ ಭಾಷಾಸಾಮರಸ್ಯವನ್ನು ತಂದಿದ್ದಾರೆ.

ವಿಶೇಷವಾಗಿ ಕನ್ನಡದ ಖ್ಯಾತನಾಮರಾದ ಚದುರಂಗ, ತರಾಸು , ಬಸವರಾಜ ಕಟ್ಟೀಮನಿ, ಎಲ್. ಎಸ್. ಶೇಷಗಿರಿ ರಾವ್ , ಸಾ. ಶಿ. ಮರುಳಯ್ಯ, ವಾಣಿ, ವೀಣಾ ಶಾಂತೇಶ್ವರ , ಸಿ. ಎನ್. ಮುಕ್ತ, ಆರ್ಯಾಂಬಾ ಪಟ್ಟಾಭಿ ಮುಂತಾದವರ ಸಾಹಿತ್ಯವನ್ನು ತೆಲುಗು ಭಾಷೆಗೆ ಅನುವಾದಿಸಿ ಸೈ ಅನಿಸಿ ಕೊಂಡಿದ್ದಾರೆ. ಇವರು ಒಳ್ಳೆ ಭಾಷಾಂತರಕಾರರೆಂಬುದಕ್ಕೆ ಇವರ ಕವಲು ದಾರಿ ಹಾಗೂ ಭೂತಾಯಿ ನಕ್ಕಾಗ ಕೃತಿಗಳೇ ಸಾಕ್ಷಿ ನುಡಿಯುತ್ತವೆ. ಇಂತಹ ಸಾಹಿತಿಗಳ ಸಂಖ್ಯೆ ಸಾವಿರ ಸಾವಿರವಾಗಬೇಕೆಂದು ಬನ್ನೂರು ರಾಜು ಹೇಳಿದರು.

ಲೋಕಾರ್ಪಣೆಗೊಂಡ ಕವಲುದಾರಿ ಕಾದಂಬರಿ ಮತ್ತು ಭೂತಾಯಿ ನಕ್ಕಾಗ ಕಥಾಸಂಕಲನ ಕೃತಿಗಳನ್ನು ಕುರಿತು ಮಾತನಾಡಿದ ವಿದ್ವಾಂಸೆ ಡಾ. ಸಿ. ಜಿ. ಉಷಾದೇವಿ, ಭಾಷಾಂತರದಿಂದ ತೆಲುಗು ಸಾಹಿತ್ಯವನ್ನು ಭಾವಪೂರ್ಣವಾಗಿ ಭಾವಾನುವಾದ ಮಾಡಿ ಕನ್ನಡೀಕರಣ ಮಾಡಿರುವ ಕವಲುದಾರಿ ಹಾಗೂ ಭೂತಾಯಿ ನಕ್ಕಾಗ ಎರಡೂ ಕೃತಿಗಳು ಅನುವಾದಿತ ಕೃತಿಗಳೆನಿಸದಷ್ಟು ಸ್ವತಂತ್ರ ಕೃತಿಗಳಂತೆಯೇ ಹೊರಹೊಮ್ಮಿವೆ ಎಂದರು.

ಮೈಸೂರು ಆರ್ಟ್ ಗ್ಯಾಲರಿಯ ಸಂಸ್ಥಾಪಕ ಅಧ್ಯಕ್ಷ ಎಲ್. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೈಸೂರು ಜಿಲ್ಲಾಧ್ಯಕ್ಷ ಎಚ್. ವಿ.ಮುರಳಿಧರ್, ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ.ಕಾವೇರಿಯಮ್ಮ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲೇಖಕಿ ವಿಜಯಾ ಶಂಕರ ಅವರನ್ನು ಸನ್ಮಾನಿಸಲಾಯಿತಲ್ಲದೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಚಿತ್ರ ಕಲಾವಿದೆ ಕವಯತ್ರಿ ಡಾ. ಜಮುನಾರಾಣಿ ಮಿರ್ಲೆ ಅವರ ಉದ್ಘಾಟನೆಯೊಡನೆ ಕವಿಗೋಷ್ಠಿಯನ್ನು ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 20ಕ್ಕೂ ಹೆಚ್ಚು ಕವಿ ಕವಿಯತ್ರಿಯರು ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...