ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾದ ಅನಾಹುತಗಳು ಸಂಭವಿಸಿದ್ದು, ಇದಕ್ಕೆಲ್ಲ ಅವ್ಯಾಹತವಾಗಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿಯೇ ಕಾರಣ ಎಂದ ಜೆಡಿಎಸ್ ಸದಸ್ಯ ಎ.ಟಿ. ರಾಮಸ್ವಾಮಿ, ರಾಜಕಾಲುವೆಗಳು ಹಾಗೂ ಕೆರೆಗಳ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ವಿಧಾನಸಭೆಯ ಅಧಿವೇಶನದ ವೇಳೆ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾಲುವೆ, ಕೆರೆ ಒತ್ತುವರಿ ಮಾಡಿಕೊಂಡವರನ್ನು ಮುಖ ಮೂತಿ ನೋಡದೆ ಒಡೆದು ಹಾಕುತ್ತೇವೆ ಎಂದು ಎಲ್ಲ ಸರ್ಕಾರಗಳೂ ಹೇಳಿವೆ. ಆದರೆ ನಾಲ್ಕು ದಿನ ಕೆಲಸ ಮಾಡಿ ಸುಮ್ಮನಾಗುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್. ಅಶೋಕ್, ಬಡವರದ್ದು ಒಡೆದರೆ ಮಾಧ್ಯಮದವರು ಸರ್ಕಾರದ ಮೇಲೆ ಮುಗಿ ಬೀಳುತ್ತಾರೆ. ಶ್ರೀಮಂತರದ್ದು ಒಡೆದರೆ ಕಾಂಗ್ರೆಸ್‌ನವರು ವಿರೋಧಿಸುತ್ತಾರೆ ಎಂದು ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರ ವಿರುದ್ಧ ಚಾಟಿ ಬೀಸಿದರು.
ಸಾವಿರಾರು ಐಟಿಬಿಟಿ ಕಂಪನಿಗಳಿದ್ದು, 20-30 ಜನರು ಒತ್ತುವರಿ ಮಾಡಿದ್ದಾರೆ. ಆದರೆ ಇದಕ್ಕೆ ರಾಮಲಿಂಗಾರೆಡ್ಡಿ ಅವರು ವಿರೋಧ ಮಾಡಿದರು. ಈ ಹಿಂದೆ ನೆರೆ ಬಂದಾಗ ಕಾಂಗ್ರೆಸ್ ಇತ್ತು, ಆಗ ಏನಾದರೂ ಮಾಡಬಹುದಾಗಿತ್ತಲ್ಲವೇ ಎಂದು ಅಶೋಕ್ ಪ್ರಶ್ನಿಸಿದರು.
ಬಳಿಕ ಮಾತು ಮುಂದುವರಿಸಿದ ಎ.ಟಿ. ರಾಮಸ್ವಾಮಿ, ಇಷ್ಟು ಮಳೆಯಾದರೂ ಹಳೆಯ ಬೆಂಗಳೂರು ಜಲಾವೃತ ಆಗಿಲ್ಲ. ಇತ್ತೀಚೆಗೆ ಅಭಿವೃದ್ಧಿಯಾದ ಬೆಂಗಳೂರಿನಲ್ಲಿ ಜಲಾವೃತವಾಗಿದೆ. ಏಕೆಂದರೆ ಇಲ್ಲೆಲ್ಲ ನೈಸರ್ಗಿಕವಾಗಿ ಹರಿದುಹೋಗುವುದಕ್ಕೆ ಬಿಡದೆ ಅವರ ಅನುಕೂಲಕ್ಕೆ ತಕ್ಕಂತೆ ರಾಜಕಾಲುವೆಗೆ ತಿರುವು ನೀಡಿದ್ದಾರೆ. 33 ಅಡಿ ಇದ್ದ ರಾಜಕಾಲುವೆಯನ್ನು 10 ಅಡಿಗೆ ಇಳಿಸಿದ್ದಾರೆ ಎಂದು ಕಿಡಿಕಾರಿದರು.
ಇ ನ್ನು 10 ಅಡಿಗೆ ಇಳಿಸಿರುವ ಇದನ್ನು ರಾಜಕಾಲುವೆ ಎನ್ನಲಾಗುತ್ತದೆ. ಕಿಂಗ್ ಕೆನಲ್ ಎಂಬುದರಿಂದ ಈ ಹೆಸರು ಬಂದಿದೆ. ಈಗ ಇಲ್ಲೆಲ್ಲ ಕೊಳಚೆ ನೀರು ತುಂಬಿಕೊಂಡು ಕೊಳಚೆ ನೀರಿನ ಕಾಲುವೆಗಳಾಗಿವೆ. ಮ್ಯಾನ್‌ಹೋಲ್ ಓಪನ್ ಆಗಿ, ಅದರಲ್ಲಿನ ಕಸಕಡ್ಡಿಗಳೆಲ್ಲ ತುಂಬಿಹೋಗಿವೆ. ಕೊಳಚೆ ನೀರಿನ ಕಾಲುವೆಗಳು ಎಂದು ಹೆಸರು ಬದಲಾಯಿಸಿಬಿಡುವುದು ಒಳ್ಳೆಯದು. ಕೆರೆಗಳೂ ಕೊಳಚೆ ನೀರಿನ ಕೆರೆಗಳಾಗಿವೆ. ಆ ಕೆರೆ ನೀರನ್ನು ಮುಟ್ಟಲೂ ಆಗುವುದಿಲ್ಲ ಎಂದರು.
ಬೆಂಗಳೂರನ್ನು ಐಟಿ ನಗರ, ಉದ್ಯಾನ ನಗರ ಎಂದು ಕರೆಯಲಾಗುತ್ತಿತ್ತು. ಆದರೆ ಇದೀಗ ಅಪಖ್ಯಾತಿ ಬರುತ್ತಿದೆ. ಇದರಿಂದ ಹೊರಬರಬೇಕೆಂದರೆ, ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡುವುದನ್ನು ನಿಲ್ಲಿಸಬೇಡಿ, ಬಡವರದ್ದು ಒಡೆಸುತ್ತಾರೆ. ದೊಡ್ಡವರದ್ದು ಬಿಡುತ್ತಿದ್ದಾರೆ ಎಂಬ ಕೂಗಿದೆ, ಆ ರೀತಿ ಆಗಲು ಬಿಡಬೇಡಿ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಅಧಿಕಾರಿಗಳೂ ಸಹಕರಿಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಬಡವರು ಅಮಾಯಕರು ಭೂಮಿ ಖರೀದಿಸಿ ಮೋಸಕ್ಕೊಳಗಾಗಿದ್ದಾರೆ. ಅಂತಹ ಅಧಿಕಾರಿಗಳಿಗೂ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಈ ಹಿಂದೆ ಬೆಂಗಳೂರನ್ನು ಉದ್ಯಾನನಗರಿ, ವಿಜ್ಞಾನಗರಿ, ಐಟಿ ಬಿಟಿ ನಗರಿ ಎಂದೆಲ್ಲ ಕರೆಯುತ್ತಿದ್ದರು ಈಗ ಅದಕ್ಕೆ ಅಪವಾದವಾಗುವಂತೆ ನಡೆದುಕೊಳ್ಳಬೇಡಿ ಎಂದು ಒತ್ತಾಯಿಸಿದರು.
ಬಡವರಿಗೆ ಶಿಕ್ಷೆ, ಬಲ್ಲಿದರ ರಕ್ಷೆ ಎಂಬ ಮಾತು ಕೇಳಿ ಬರುತ್ತಿವೆ ಅದನ್ನು ಸುಳ್ಳಾಗಿಸಿ ಕಾನೂನಿನ ರೀತಿ ತಪ್ಪು ಮಾಡಿರುವ ಎಲ್ಲರನ್ನು ಶಿಕ್ಷೆಗೆ ಒಳಪಡಿಬೇಕು ಎಂದರು.