ಬೆಂಗಳೂರು: ಸಿನಿಮಾವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಖಾಸಗಿ ವಾಹಿನಿಯ ಮುಖ್ಯಸ್ಥರ ವಿರುದ್ಧ ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ತೀವ್ರ ಅಸಮಾಧಾನದ ನುಡಿಗಳಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಕುರಿತ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸರವೇಗದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಚಲನಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ ಅವರು, ಈಗ ಸಿನಿಮಾ ಹೊರತಾಗಿ ಸುದ್ದಿಗೆ ಗ್ರಾಸವಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ, ಕಾಮಿಡಿ ಕಿಲಾಡಿಗಳು ರೀತಿಯ ಕಾರ್ಯಕ್ರಮಗಳಲ್ಲಿ ವೀಕ್ಷಕರ ಮೆಚ್ಚಿನ ಜಡ್ಜ್ ಆಗಿದ್ದಾರೆ ಕೂಡ. ಆದರೆ ಈಗ ಅದೇ ವಾಹಿನಿಯ ಮನರಂಜನೆಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಯೋಗರಾಜ್ ಭಟ್ ಅವರು, ತಾವು ನಿರ್ದೇಶಿಸಿರುವ ಮುಂದಿನ ಚಿತ್ರಗಳ ಡಿಜಿಟಲ್ ಹಕ್ಕನ್ನು ಖರೀದಿಸುವುದಾಗಿ ಹೇಳಿದ್ದ ರಾಘವೇಂದ್ರ ಹುಣಸೂರು ಈಗ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಗರಂ ಆಗಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ ಯೋಗರಾಜ್ ಭಟ್ ಅವರು, ‘ರಾಘಪ್ಪ ನೀನು ಜೀ ಟಿವಿ ಉದ್ಧಾರ ಮಾಡಿದವನಾಗಿ ನಿನ್ನ ನಂಬಿಕೊಂಡಿರೋ ಇಂಡಸ್ಟ್ರಿಯವರನ್ನೂ ಉದ್ಧಾರ ಮಾಡಪ್ಪೋ.
ಯೋಗರಾಜ್ ಭಟ್ ಆಡಿಯೋ
ಪದವಿಪೂರ್ವ ಅಂತ ಅಚ್ಚ ಕನ್ನಡದ ಚಿತ್ರ, ತುಂಬಾ ಅದ್ಭುತವಾಗಿ ಬಂದಿದೆ. ಈ ಚಿತ್ರದ ಟಿವಿ ಹಾಗೂ ಡಿಜಿಟಲ್ ತಗೊತಿನಿ ಅಂತ ಹೇಳಿದ್ದೆ. ಅದರ ಪ್ರಪೋಸಲ್ ಕಳಿಸಿದ್ದೀನಿ, ಆದರೆ ಫೋನ್ ತೆಗೀತಾ ಇಲ್ಲ ನೀನು. ಈಗ ಚಿತ್ರವನ್ನು ತಗೊಳ್ತಿಯೋ ಇಲ್ವೋ ಕ್ಲಾರಿಟಿ ಬೇಕು, ತುಂಬಾ ಅರ್ಜೆಂಟ್ ಇದೆ, ಇನ್ನು ಹತ್ತು ನಿಮಿಷದಲ್ಲಿ ಕಾಲ್ ಮಾಡು. ಇಲ್ಲಾ ಅಂದ್ರೆ ಮತ್ತೊಂದು ಆಡಿಯೋ ಕಳುಹಿಸುತ್ತೇನೆ, ಅದನ್ನು ಕೇಳಿದ್ರೆ ನೀನು ಉರ್ಕೊಂಡು ನೇಣು ಹಾಕಿಕೊಂಡು ಸತ್ತೋಗ್ತಿಯ ಆಮೇಲೆ ಬಯ್ಕೊಬೇಡ” ಎಂದು ವಾಟ್ಸಪ್ ಆಡಿಯೊ ಮೂಲಕ ಹೇಳಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಆಡಿಯೋ ಕಳುಹಿಸಿರುವ ಅವರು, ‘ಅಲ್ಲ ರಾಘು, ಯಥಾಪ್ರಕಾರ ಫೋನ್ ತೆಗಿತಾ ಇಲ್ಲ, ಇಪ್ಪತ್ತು ದಿನದಿಂದ ಕಾಲ್ ಮಾಡ್ತಾ ಇದ್ದೇನೆ ನಿಂಗೆ, ವಾಪಸ್ ಫೋನ್ ಮಾಡಿಲ್ಲ. ಈಗ ಸರಿಯಾಗಿ ಉಗೀತಿನಿ, ಸರಿಯಾಗಿ ಕೇಳುಸ್ಕೋ ಬೇಕು ನೀನು” ಎಂದು ಹೇಳಿದ್ದಾರೆ.
‘ನಿಂಗೆ ಕಷ್ಟ ಅಂದಾಗ ನಮ್ಮತ್ರ ಬರ್ತಿಯ, ಅದೇ ನಮಗೆ ಅಗತ್ಯ ಬಿದ್ದಾಗ ಸಹಾಯ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ ಹಾಗೂ ಇದು ನನ್ನೊಬ್ಬನ ಆರೋಪವಲ್ಲ, ಮುಕ್ಕಾಲು ಭಾಗ ಚಿತ್ರರಂಗದ ಆರೋಪ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ “ನಾವೆಲ್ಲಾ ಕಾಲ್ ಮಾಡೋವಷ್ಟು ದೊಡ್ಡವನಲ್ಲ ನೀನು ತುಂಬಾ ಅಲ್ಪ, ಅದು ನಿಂಗೂ ಗೊತ್ತು ಇರಲಿ ಅಂತ ನೆನಪಿಸುತ್ತಿದ್ದೇನೆ ಎಂದಿದ್ದಾರೆ.
ಅಂತೆಯೇ ‘ಯಾವ ಇಂಡಸ್ಟ್ರಿ ಚಿತ್ರಗಳನ್ನು ಬಳಸಿಕೊಂಡು ನಾವು ಟಿಆರ್‌ಪಿಯಲ್ಲಿ ಮುಂದು ಅಂತ ಮೆರೆಯುತ್ತೀಯೋ ಅದೇ ಇಂಡಸ್ಟ್ರಿಯವರ ಫೋನ್ ತೆಗೆಯಲ್ಲ ನೀನು… ಅಂದರೆ ನೀನು ತುಂಬಾ ಬೆಳೆದಿದ್ದೀಯ ಅಂತ ಅರ್ಥ, ಇಲ್ಲ ನಾವು ಸತ್ತಿದ್ದೀವಿ ಅಂತ ಅರ್ಥ. ನೀ ಯಾವುದೇ ಕಾರಣಕ್ಕೂ ಬೆಳೆಯೋ ಮಗ ಅಲ್ಲ, ನಾವು ಸಾಯೋ ಮಂದಿ ಅಲ್ಲ ನಂಗೊತ್ತು.
ನಿನ್ನಂತವರನ್ನೆಲ್ಲಾ ಹೂತೇ ಲೇಟಾಗಿ ಹೋಗ್ತೀನಿ. ನಿನ್ನ ಅವನತಿ ಶುರುವಾಗಿದೆ ಕಣೋ. ಬೀಳ್ತಿಯ ಆದ್ರೆ ಯಾವ ಹೈಟ್‌ನಿಂದ ಅಂತ ಗೊತ್ತಿಲ್ಲ. ಎಲ್ಲ ರೀತಿಯಲ್ಲೂ ದಬಾರ್ ಅಂತ ಬೀಳ್ತಿಯ, ಬಿದ್ದಾಗ ನಾಲ್ಕು ಜನ ಬರ್ತಾರೆ, ನನ್ನ ಕರ್ಮ ನಾನು ಬರ್ತೀನಿ, ಎತ್ತುತ್ತೀನಿ ಟಮಟೆ ಡಾನ್ಸ್ ಬೇಕದ್ರು ಮಾಡ್ತಿನಿ, ಆದರೆ ನಿನ್ನ ಜತೆ ವ್ಯವಹಾರ ಮಾತ್ರ ಬೇಡ” ಎಂದು ಕಿಡಿಕಾರಿದ್ದಾರೆ.
‘ಪದವಿಪೂರ್ವ, ಗರಡಿ, ಶಿವಣ್ಣನ ಕರಕಟ ದಮನಕ ಚಿತ್ರಗಳ ವ್ಯವಹಾರವನ್ನು ಬೇರೆಯವರ ಜತೆ ಮಾಡ್ತೀನಿ. ನಿನ್ನ ಜತೆಯಂತೂ ಮಾಡಲ್ಲ, ನಿನ್ನ ಜತೆ ವ್ಯವಹಾರಕ್ಕೆ ಇಳಿಯಲ್ಲ, ಫೋನ್ ಕೂಡ ಮಾಡಲ್ಲ, ಸಹವಾಸ ಸಾಕು, ನಿನ್ನನ್ನು ತಿದ್ದಿಕೋ ಅಂತಾನೂ ಹೇಳಲ್ಲ. ಏಕೆಂದರೆ ನೀನು ತುಂಬಾ ಹೈಟ್‌ಗೆ ಹೋಗಿದ್ದೀಯ ನಿನ್ನ ಬರಿಗೈನಲ್ಲಿ ಹಿಡಿದುಕೊಳ್ಳೋಕೆ ನನ್ನಂತ ಬಡವನಿಂದ ಆಗಲ್ಲ. ನಾವು ನೌಕರರು, ಮೇಸ್ತ್ರಿಗಳು, ಕಾರ್ಪೋರೇಷನ್ ಅವರು ಅನ್ಕೊಳಪ್ಪ. ನೀನು ನೀಟಾಗಿ ಬೀಳು ತಲೆ ಹೊಡ್ಕೊ, ಬದುಕಿದ್ರೆ ಬರ್ತೀನಿ. ಟಾಟಾ ಬೈ ಬೈ… ಎಂದು ಹೇಳಿದ್ದಾರೆ.
ಈ ಆಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಚಿತ್ರರಂಗ ಮತ್ತು ಮಾಧ್ಯಮರಂಗದ ನಡುವಿನ ಮುಸುಕಿನ ಗುದ್ದಾಟದ ಕುರಿತು ಮಿಶ್ರ ಪ್ರತಿಕ್ರಿಯೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.