ಬೆಂಗಳೂರು: ಜಯನಗರ ವ್ಯಾಪ್ತಿಯ ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಮಂಡಳ ವತಿಯಿಂದ ನಿರ್ಮಿಸಿರುವ ಮನೆಗಳ ಮಧ್ಯಗೋಡೆಯನ್ನು ಒಡೆದು ಹಾಕಿ ಅನಧಿಕೃತ ಪ್ರವೇಶ ಮಾಡಿದ ವ್ಯಕ್ತಿಗೆ ಸಿಎಂಎಂ ನ್ಯಾಯಾಲಯ 10 ಸಾವಿರ ರೂ. ದಂಡ ತಪ್ಪಿದ್ದಲ್ಲಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ.177 ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನರ್ಮ್, ಬಿಎಸ್ಯುಪಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ನಿವೇಶನ ವಸತಿ ಸಂಕೀರ್ಣದ ಬ್ಲಾಕ್ ನಂ.1 ರಲ್ಲಿ 1ನೇ ಮಹಡಿಯ ಸಂಖ್ಯೆ 11 ಅನ್ನು ವೆಂಕಟೇಶ್ ಬಿನ್ ಲೇಟ್ ಕುರಪ್ಪನ್ ಎಂಬುವರಿಗೆ ಹಂಚಿಕೆ ಮಾಡಿದ್ದು, ಆ ನಿವೇಶನಕ್ಕೆ ಹೊಂದಿಕೊಂಡಿರುವ ಮನೆ ನಂ.15 ಖಾಲಿ ಇತ್ತು.
ವೆಂಕಟೇಶ್ ಬಿನ್ ಲೇಟ್ ಕುರಪ್ಪನ್ ಎಂಬುವರೆ ಶಿಕ್ಷೆಗೆ ಒಳಗಾದ ಆರೋಪಿ.
ಘಟನೆ ವಿವರ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ನಂ.11 ಮತ್ತು 15ರ ಮಧ್ಯ ಮಂಡಳಿಯಿಂದ ನಿರ್ಮಾಣ ಮಾಡಿದ್ದ ಅಡ್ಡಗೋಡೆಯನ್ನು ತೆರವುಗೊಳಿಸಿ ನಿವೇಶನ ಸಂಖ್ಯೆ 11 ಮತ್ತು 15 ಅನ್ನು ಒಂದೇ ಮನೆಯನ್ನಾಗಿ ನವೀಕರಣ ಮಾಡಿಕೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದ.
ಈ ಸಂಬಂಧ ವೆಂಕಟೇಶ್ ವಿರುದ್ಧ ಬಿಎಂಟಿಎಫ್ ಪೊಲೀಸ್ ಠಾಣೆ ಮೊ.ಸಂ.30/2015 ಕಲಂ.5(ಬಿ) ಕರ್ನಾಟಕ ಸ್ಲಂ ಏರಿಯಾ ಆಕ್ಟ್-1973 ಮತ್ತು 448, 427, 188 ಐಪಿಸಿ ರೀತ್ಯಾ ದಿನಾಂಕ:18- 06-2015 ರಂದು ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ಕೈಗೊಂಡು ಸಾಕ್ಷಾಧಾರ ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ಸಿ.ಎಂ.ಎಂ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಘನ ನ್ಯಾಯಾಲಯವು ವಿಚಾರಣೆ ನಡೆಸಿ, ವಿಚಾರಣೆ ಕಾಲದಲ್ಲಿ ಆರೋಪಿಯು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಮನೆ ನಂ.11 ಮತ್ತು 15ರ ಮಧ್ಯ ಮಂಡಳಿಯಿಂದ ನಿರ್ಮಾಣ ಮಾಡಿದ್ದ ಅಡ್ಡಗೋಡೆ ತೆರವುಗೊಳಿಸಿ ನವೀಕರಣ ಮಾಡಿರುವುದು ದೃಢಪಟ್ಟಿದೆ.
ಹೀಗಾಗಿ ರಾಗಿಗುಡ್ಡ ಸ್ಲಮ್, ಜೆ.ಪಿ.ನಗರ 2ನೇ ಹಂತ ಬೆಂಗಳೂರಿನ ನಿವಾಸಿ ಆರೋಪಿ ವೆಂಕಟೇಶ್ ಬಿನ್ ಲೇಟ್ ಕುರಪ್ಪನ್ಗೆ 10 ಸಾವಿ ರೂ ದಂಡ ವಿಧಿಸಿ, ದಂಡ ಕಟ್ಟಲು ತಪ್ಪಿದ್ದಲ್ಲಿ 75 ದಿನ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯವು ಆದೇಶಿಸಿರುತ್ತದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕುಷ್ಣಕುಮಾರ್ ಮತ್ತು ಸಿಬ್ಬಂದಿಯವರಿಗೆ ಡಾ. ಕೆ.ರಾಮಚಂದ್ರರಾವ್ ಐ.ಪಿ.ಎಸ್. ಎಡಿಜಿಪಿ ಬಿಎಂಟಿಎಫ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.