ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ ಹೀಗಾಗಿ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಜಯಪಥಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಾರಿಗೆ ನೌಕರರು ಕಳೆದ 2021ರ ಏಪ್ರಿಲ್ ತಿಂಗಳಿನಲ್ಲಿ ತಮ್ಮ ನೋವವನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಮುಷ್ಕರ ಮಾಡಿದರು.
ಆ ವೇಳೆ ವೇತನ ಸೇರಿದಂತೆ ಇತರ ಸರ್ಕಾರಿ ಮತ್ತು ನಿಗಮಮಂಡಳಿಗಳ ನೌಕರರಿಗಿಂತ ಹೆಚ್ಚು ವೇತನ ಕೊಡಿ ಎಂದು ಕೇಳಲಿಲ್ಲ. ಅವರಿಗೆ ಸರಿ ಸಮಾನವಾದ ವೇತನ ಕೊಡಿ ಎಂದು ಮನವಿ ಮಾಡಿದರು. ಆ ಬೇಡಿಯನ್ನು ಈಡೇರಿಸುವ ಬದಲು ನೌಕರರಿಗೆ ಕಿರುಕುಳ ನೀಡಿತು ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಷ್ಕರ ಹತ್ತಿಕ್ಕುವ ನಿಟ್ಟಿನಲ್ಲಿ ಎಸ್ಮಾ ಜಾರಿ ಮಾಡುವ ಎಚ್ಚರಿಕೆ ನೀಡಿ ಬಳಿಕ 2ಸಾವಿರಕ್ಕೂ ಹೆಚ್ಚು ನೌಕರರ ಮೇಲೆ ವಜಾ, ಅಮನತು ಹಾಗೂ ವರ್ಗಾವಣೆ ಜತೆಗೆ ಪೊಲೀಸ್ ಕೇಸ್ಗಳನ್ನು ಹಾಕಿ ಅವರನ್ನು ಬೀದಿಗೆ ತಂದು ನಿಲ್ಲಿಸಿದೆ. ಇಂಥ ಧೋರಣೆಗಳನ್ನು ಬಿಟ್ಟು ಆ ಸಂಘಟನೆಗಳೊಂದಿಗೆ ಮಾತನಾಡಿ ಅವರ ಬೇಡಿಕೆ ಈಡೇರಿಸಿ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಟಿಷ್ ತೊಘಲಕ್ ಸರ್ಕಾರವಿದೆಯೋ ಅಥವಾ ಬಿಜೆಪಿ ಸರ್ಕಾರ ಇದೆಯೋ ಎಂದು ಸರ್ಕಾರದ ನಡೆಯನ್ನು ಖಂಡಿಸಿದ ಕುಮಾರಸ್ವಾಮಿ ಅವರು, ಮೊದಲು ಸಾರಿಗೆ ನಿಗಮಗಳಲ್ಲಿನ ಸೋರಿಕೆಯನ್ನು ತಡೆಗಟ್ಟಿ ನೌಕರರ ಬೇಡಿಕೆ ಈಡೇರಿಸುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ.