
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ ಒಂದರಿಂದ ಶೇ.15ರಷ್ಟು ಹೆಚ್ಚಳವಾಗಿರುವ ವೇತನದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ ಒಂದರಿಂದ ಜಾರಿ ಆಗಬೇಕಿರುವ ವೇತನ ಪರಿಷ್ಕರಣೆ ಕುರಿತು ಚರ್ಚಿಸುವ ಸಂಬಂಧ ನಿನ್ನೆ ಕರೆದಿದ್ದ ಸರ್ವ ಸಂಘಟನೆಗಳ ಸಭೆ ಗಲಾಟೆಯಲ್ಲಿ ಅಂತ್ಯಕಂಡಿದೆ.
38ಕ್ಕೂ ಹೆಚ್ಚು ಸಾರಿಗೆ ನೌಕರರ ಸಂಘಟನೆಗಳಿದ್ದು, ಅವುಗಳಲ್ಲಿ ಪ್ರಮುಖವಾಗಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟ ಎಂಬ ಎರಡು ಬಣಗಳಿವೆ. ಇವು ಸಾರಿಗೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಲ್ಲನ್ನು ಕೊಡಿಸಲು ಪ್ರಮುಖ ಪಾತ್ರ ವಹಿಸುತ್ತಿವೆ.
ಆದರೆ, ಇಲ್ಲಿ ಜಂಟಿ ಕ್ರಿಯಾ ಸಮಿತಿ ಹಾಗೂ ನೌಕರರ ಒಕ್ಕೂಟ ಈ ಎರಡು ಬಣಗಳಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳ ಪ್ರಮುಖರಲ್ಲಿ ಭಾರಿ ಭಿನ್ನಾಭಿಪ್ರಾಯವಿದ್ದು ಇಲ್ಲಿ ಜಂಟಿ ಕ್ರಿಯಾ ಸಮಿತಿಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳ ಮುಖಂಡರು ಸರಿ ಸಮಾನ ವೇತನಕ್ಕೆ ನಮ್ಮ ವಿರೋಧವಿದೆ ಏನಿದ್ದರೂ 4 ವರ್ಷಗಳಿಗೊಮ್ಮೆ ಆಗುತ್ತಿರುವ ವೇತನ ಪರಿಷ್ಕರಣೆಯೇ ಆಗಬೇಕು ಎಂದು ಹೇಳುತ್ತಿದ್ದಾರೆ.
ಇನ್ನು ಇತ್ತ ನೌಕರರ ಒಕ್ಕೂಟ ಇಲ್ಲ ನಮ್ಮ ನೌಕರರು 4ವರ್ಷಕ್ಕೊಮ್ಮೆ ಬೀದಿಗಳಿದು ಹೋರಾಟ ಮಾಡಿ ವಜಾ, ಅಮಾನತು, ವರ್ಗಾವಣೆ ಜತೆಗೆ ಪೊಲೀಸ್ ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡ ಬಳಿಕ ಆಗುತ್ತಿರುವ ವೇತನ ಪರಿಷ್ಕರಣೆ ನಮಗೆ ಬೇಡ ಸರ್ಕಾರ ಸರ್ಕಾರಿ ನೌಕರರಿಗೆ ಕೊಡುತ್ತಿರುವಂತೆ ನಮಗೂ ಹುದ್ದೆವಾರು ಸರಿ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ನಡುವೆ ಸಾರಿಗೆ ಅಧಿಕಾರಿಗಳ ಸಂಘಟನೆಗಳ ಪದಾಧಿಕಾರಿಗಳು ಕೂಡ ಸರಿ ಸಮಾನವ ವೇತನ ಆಗಬೇಕು ಎಂದು ಹೇಳುತ್ತಿದ್ದಾರೆ. ಅದರೆ, ಈ ಬೇಡಿಕೆಯನ್ನು ಈಡೇರಿಸಿಕೊಳ್ಳುವುದಕ್ಕೆ ಬಸ್ ನಿಲ್ಲಿಸಿ ಹೋರಾಟ ಮಾಡುವುದಕ್ಕೆ ಅಂದರೆ ಮುಷ್ಕರ ಮಾಡುವುದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಅಡ್ಡಗೋಡೆಮೇಲೆ ದೀಪವಿಟ್ಟಂತೆ ನಡೆದುಕೊಳ್ಳುತ್ತಿದ್ದಾರೆ.
ಈ ನಡುವೆ ನೌಕರರ ಸಂಘದ ಪದಾಧಿಕಾರಿಗಳು ಏನೆ ಆಗಲಿ ಜಂಟಿ ಹಾಗೂ ಒಕ್ಕೂಟದ ಪದಾಧಿಕಾರಿಗಳನ್ನು ಒಂದೆಡೆ ಸೇರಿಸಿ ನೌಕರರಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸಲು ಈ ಒಂದು ಪ್ರಯತ್ನ ಮಾಡೇಬಿಡೋಣ ಎಂದು ನಿನ್ನೆ ಅಂದರೆ ಮಾ.27ರ ಗುರುವಾರ ಕನ್ನಡ ಭವನದಲ್ಲಿ ಒಂದು ಸಭೆಯನ್ನು ಆಯೋಜನೆ ಮಾಡಿ ಎರಡು ಬಣಗಳನ್ನು ಒಗ್ಗೂಡಿಸಿದರು.
ಆದರೆ ಸಂಘಟನೆ ಪದಾಧಿಕಾರಿಗಳು ಮಾಡಿದ ಶತಾಯಗತಾಯ ಪ್ರಯತ್ನ ಈ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯದಿಂದ ಗಲಾಟೆಯಲ್ಲಿ ಅಂತ್ಯಕಂಡಿದ್ದು ಒಗ್ಗಟ್ಟಿನ ಮಂತ್ರಕ್ಕೆ ಕೊಳ್ಳಿಬಿದ್ದಂತಾಗಿದೆ. ಹೀಗಾಗಿ ಮುಂದೆ ಈ ಜಂಟಿ ಸಮಿತಿ ಮತ್ತು ನೌಕರರ ಒಕ್ಕೂಟ ಬೇರೆ ಬೇರೆ ಆಗಿಯೇ ಹೋರಾಟ ಮಾಡುತ್ತವೆ.
ಅದರಲ್ಲಿ ಪ್ರಮುಖವಾಗಿ ನೌಕರರ ಒಕ್ಕೂಟ ಇಟ್ಟಿರುವ ಬೇಡಿಕೆಗೆ ಸಾರಿಗೆಯ ಬಹುತೇಕ ಎಲ್ಲ ನೌಕರರು ಸಮ್ಮತಿ ಸೂಚಿಸಿದ್ದಾರೆ. ಆದರೆ ಜಂಟಿ ಕ್ರಿಯಾ ಸಮಿತಿ ಇಟ್ಟಿರುವ ಬೇಡಿಕೆಗೆ ಶೇ.10ಕ್ಕೂ ಕಡಿಮೆ ನೌಕರರು ಬೆಂಬಲ ಸೂಚಿಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ನೌಕರರಿಗೆ ಸರಿ ಸಮಾನ ವೇತನವನ್ನು ಜಾರಿ ಮಾಡಬೇಕು ಎಂದು ಎಲ್ಲ ಅಧಿಕಾರಿಗಳು ನೌಕರರು ಒತ್ತಾಯ ಮಾಡುತ್ತಿದ್ದಾರೆ.
ಈ ನಡುವೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯನ್ನೂ ಈಗ ಅಂದರೆ ಅಧಿಕಾರಕ್ಕೆ ಬಂದಿರುವ ಈ ಸಮಯದಲ್ಲಿ ಈಡೇರಿಸಿ ಎಂದು ಕೇಳುವ ಬದಲಿಗೆ ಜಂಟಿ ಕ್ರಿಯಾ ಸಮಿತಿ ಇದನ್ನು ಬಿಟ್ಟು ಹಳೇ ಪದ್ಧತಿಯಂತೆ ವೇತನ ಮರಿಷ್ಕರಣೆ ಮಾಡಬೇಕು ಎಂಬುದನ್ನೆ ಸರ್ಕಾರ ಮುಂದೆ ಇಡುತ್ತಿದೆ.
ಇನ್ನು ಈ ಬಣಗಳ ಬಡಿದಾಟ ಹಾಗೂ ಅಧಿಕಾರಿಗಳ ಅಡ್ಡಗೋಡೆ ಮೇಲೆ ದೀಪವಿಟ್ಟಂತಹ ಹೇಳಿಕೆಗಳು ಸಮಸ್ತ ನೌಕರರನ್ನು ಚಿಂತಗೆ ದೂಡುತ್ತಿದ್ದರೆ ಅತ್ತ ಸರ್ಕಾರ ಹಾಲು ಕುಡಿದಷ್ಟೆ ಸಂತೋಷದಿಂದ ಬಡಿದಾಡವನ್ನು ನೋಡುತ್ತ ಕಾಲ ಕಳೆಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ನೌಕರರು ಹಳೇಗಂಡನ ಪಾದವೇ ಗತಿ ಎಂಬ ಸ್ಥಿತಿಗೆ ತಲುಪಿ ಸರ್ಕಾರ ಯಾವಾಗ ಕೊಡುತ್ತದೋ ಆಗ ಅದು ಕೊಟಷ್ಟನ್ನು ತೆಗೆದುಕೊಂಡು ಡ್ಯೂಟಿ ಮಾಡಬೇಕಾಗುತ್ತದೆ.
ಕಾರಣ ಜಂಟಿ ಕ್ರಿಯಾ ಸಮಿತಿಯವರು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟು ಬಳಿಕ ಸರ್ಕಾರ ಶೇ.12ರಷ್ಟು ಹೆಚ್ಚಳ ಮಾಡುತ್ತೇವೆ ಎಂದು ಹೇಳುತ್ತದೆ ಆಗ ಇದು ಆಗುವುದಿಲ್ಲ ಎಂಬ ಬೊಂಬರಾಟ ಆರಂಭವಾಗಿ ಕೊನೆಗೆ ಜಂಟಿ ಸಮಿತಿಯ ಬೇಡಿಕೆಯನ್ನೂ ಬದಿಗಿಟ್ಟು 2020ರಲ್ಲಿ ಆಗಿರುವಂತೆ ಮತ್ತೆ ಶೇ.15ರಷ್ಟು ಹೆಚ್ಚಳ ಮಾಡಿ ಸರ್ಕಾರ ಘೋಷಣೆ ಮಾಡಿದರೆ ಇದು ಸರ್ಕಾರದ ಏಕಪಕ್ಷೀಯ ನಿರ್ಧಾರ ಇದಕ್ಕೆ ನಮ್ಮ ವಿರೋಧವಿದೆ ಎಂದು ಕೂಗಾಡಿಕೊಂಡು ನೌಕರರ ನಂಬಿಸುವ ನಾಟಕವಾಡಿ ಬಳಿಕ ಸಿಎಂ ಬಳಿಗೆ ಹೋಗಿ ಹೂ ಗುಚ್ಛಕೊಟ್ಟು ನೌಕರರ ಕಿವಿಗೆ ದಾಸವಾಳ ಇಟ್ಟು ಬರುತ್ತಾರೆ.
ಇದು ಮುಂದೆ ನಡೆಯುವ ಡ್ರಾಮ ಎಂಬುವುದು ಬಹುತೇಕ ಪಕ್ಕ. ಇದು ಆಗಬಾರದು ಎಂದರೆ ಈಗ ನೌಕರರ ಒಕ್ಕೂಟ ಸರಿ ಸಮಾನ ವೇತನವನ್ನು ತಮ್ಮ ಪ್ರಣಾಳಿಕೆ ಭರವಸೆಯಲ್ಲಿ ಕೊಟ್ಟಂತೆ ಈಡೇರಿಸಿ ಎಂದು ಸಿಎಂ ಹಾಗೂ ಸಾರಿಗೆ ಸಚಿವರ ಮೇಲೆ ಒತ್ತಡ ಹಾಕಬೇಕು. ಅದನ್ನು ಬಿಟ್ಟು ತಟಸ್ಥವಾದರೆ ಬೊಂಬರಾಟದಲ್ಲೇ ವೇತನ ಪರಿಷ್ಕರಣೆ ಆಗುವುದು ಬಹುತೇಕ ಖಚಿತ.