ವಿಧಾನಪರಿಷತ್: ಕಳೆದ 2016ರಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಿದ್ದು 2020ರ ಜನವರಿಯಲ್ಲಿ ಆಗಬೇಕಿದ್ದದ್ದು ಈವರೆಗೂ ಅಂದರೆ 7ವರ್ಷ ಸಮೀಪಿಸುತ್ತಿದ್ದರೂ ವೇತನ ಪರಿಷ್ಕರಣೆ ಮಾಡದೆ ಸರ್ಕಾರ ವಿಳಂಬಧೋರಣೆ ತಳೆದಿದೆ.
ಹೀಗಾಗಿ ಈ ಬಗ್ಗೆ ಇಂದು ನಡೆದ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ಸದಸ್ಯ ಡಿ.ಎಸ್. ಅರುಣ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಸಮಿತಿ ಈಗಾಗಲೇ ರಚಿಸಲಾಗಿದ್ದು, ಸಮಿತಿಯಿಂದ ವರದಿ ಸಲ್ಲಿಕೆಯೂ ಆಗಿದೆ. ಆದ್ದರಿಂದ ಸಿಎಂ ಜತೆ ಮಾತನಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು 2020ರ ಜನರಿಯಲ್ಲೇ ವೇತನ ಪರಿಷ್ಕಣೆ ಆಗಬೇಕಿತ್ತು. ಆದರೆ ಅದು ಆಗಿಲ್ಲ, ನಂತರ 2021ರ ಏಪ್ರಿಲ್‌ನಲ್ಲಿ ವೇತನ ಪರಿಷ್ಕರಣೆ ಸಂಬಂಧ ನೌಕರರು ಭಾರಿ ಪ್ರತಿಭಟನೆ ಕೂಡ ಮಾಡಿದ್ದರು, ಹೀಗಾಗಿ ಆದಷ್ಟೂ ಬೇಗ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ವೇತನ ಪರಿಷ್ಕೆಣೆ ಸಂಬಂಧ ಸಮಿತಿ ರಚಿಸಲಾಗಿದ್ದು, ಸಮಿತಿ ಕೂಡ ವರದಿ ಸಲ್ಲಿಸಿದೆ ಎಂದರು.
ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಿಲ್ಲ. ಕೆಎಸ್ಆರ್ಟಿಸಿ ಮತ್ತು ಇತರ ನಿಗಮಗಳ ಹಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಪರಿಹಾರ ಒದಗಿಸಬೇಕು. ಸಾರಿಗೆ ಇಲಾಖೆಯ ಬಸ್‌ಗಳಿಗೆ ಖಾಸಗಿ ಬಂಕ್‌ಳಿಂದ ಡೀಸೆಲ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದು ಬೇಸರದ ಸಂಗತಿ ಎಂದು ಡಿ.ಎಸ್.ಅರುಣ್ ಹೇಳಿದರು.
ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, 2016ರ ನಂತರ ಸಾರಿಗೆ ನಿಗಮಗಳಲ್ಲಿ ವೇತನ
ಪರಿಷ್ಕರಣೆ ಆಗಿಲ್ಲ. ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಬಸ್ ಟಿಕೆಟ್ ದರ ಕೂಡ ಹೆಚ್ಚಳ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವೇತನ ಪರಿಷ್ಕರಣೆ ವಿಚಾರ ಇತ್ಯರ್ಥ ಮಾಡುತ್ತೇವೆ ಎಂದರು.
ಇನ್ನು ಕಳೆದ 2020ರ ಜನವರಿಯಿಂದಲೇ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಆಗಬೇಕಿದ್ದು, ಅಧಿವೇಶನ ನಡೆಯುವಾಗೆಲ್ಲ ಈ ಮಾತನ್ನು ಸಚಿವರು ಹೇಳುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ಪರಿಷ್ಕರಣೆ ಮಾಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಬರುವುದರಿಂದ ಸರ್ಕಾರ ಆದಷ್ಟು ಶೀಘ್ರದಲ್ಲೇ ವೇತನ ಪರಿಷ್ಕರಣೆ ಮಾಡಬೇಕಿದೆ.
ನೌಕರರ ಹಲವು ಸಂಘಟನೆಗಳು 4 ವರ್ಷಕೊಮ್ಮೆ ನಡೆಯುವ ಈ ಅವೈಜ್ಞಾನಿಕ ಅಗ್ರಿಮೆಂಟ್ ವೇತನ ಪರಿಷ್ಕರಣೆ ಕೈ ಬಿಟ್ಟು ವೇತನ ಆಯೋಗದಂತೆ ವೇತನ ನೀಡಬೇಕು ಎಂದು ಒತ್ತಾಯ ಮಾಡಿ ಕಳೆದ 2020ರಿಂದಲೂ ನೂರಾರು ಮನವಿಗಳನ್ನು ಸಲ್ಲಿಸಿವೆ. ಆದರೆ, ಸರ್ಕಾರ ಇನ್ನೂ ಆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.
ಇನ್ನು ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಅದಕ್ಕೂ ಮುನ್ನ ವೇತನ ಪರಿಷ್ಕರಣೆ ಮಾಡಲೇ ಬೇಕಿರುವುದರಿಂದ ಅಗ್ರಿಮೆಂಟ್ ಮೂಲಕ ವೇತನ ಪರಿಷ್ಕರಣೆ ಮಾಡುತ್ತಾರೋ ಅಥವಾ ನೌಕರರ ಬೇಡಿಕೆಯಂತೆ ವೇತನ ಆಯೋಗದಡಿ ವೇತನ ಪರಿಷ್ಕರಣೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.