ಮಂಡ್ಯ: ರೈತರ ನಾಡದ ಮಂಡ್ಯದಲ್ಲಿ ಮೊನ್ನೆ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ, ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ 25 ಸಾವಿರಕ್ಕೂ ಹೆಚ್ಚಿನ ಜನರನ್ನ ಕರೆಸಲಾಗಿತ್ತು.
ಜನರಿಗೆ ಊಟ ಕೊಟ್ಟರೇ ಭಾಷಣ ಕೇಳಲ್ಲ, ಖಾಲಿ ಕುರ್ಚಿ ಕಾಣ್ತಾವೆಂದು ಸಮಾವೇಶಕ್ಕೆ ಬಂದ ಜನರಿಗೆ ಊಟ ಕೊಡದೆ ನಿರ್ಲಕ್ಷ್ಯಿಸಿ, ಊಟ ಕೊಡೋದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಜನರು ಸಮಾವೇಶ ಮುಗಿದ ನಂತರ ಊಟ ಮಾಡದೆ ತಮ್ಮ ಊರಿನತ್ತ ವಾಪಸ್ಸಾದರಾಗಿದ್ದಾರೆ. ಹೀಗಾಗಿ ಜನ ಊಟ ಮಾಡದೆ ವೇಸ್ಟ್ ಆದ ಟನ್ ಗಟ್ಟಲೇ ಅನ್ನ, ಪಾಯಸವನ್ನು ಬಿಜೆಪಿ ಕಾರ್ಯಕರ್ತರು ವಿಧಿ ಇಲ್ಲದೆ ನೆಲಕ್ಕೆ ಚೆಲ್ಲಿದ್ದಾರೆ. 250 ಕೆಜಿಯ 15 ದಬರಿ ತರಕಾರಿ ಬಾತ್, 7 ದಬರಿ ಮೊಸರನ್ನ, 50 ಸಾವಿರ ಬಾದ್‌ಶಾ ವೇಸ್ಟ್ ಆಗಿದೆ. ಇದಿಷ್ಟೆ ಅಲ್ಲದೆ ದಬರಿಗಟ್ಟಲೆ ಪಾಯಸ ಉಳಿದಿದ್ದು ಅದನ್ನು ಮಣ್ಣುಪಾಲು ಮಾಡಿದ್ದಾರೆ.
ಇನ್ನು ಬೆಂದಿದ್ದ ಅಷ್ಟೊಂದು ಅನ್ನ, ಆಹಾರವನ್ನು ಬೇರೆ ಕಡೆ ಸಾಗಿಸಲು ಪರದಾಡಿದ್ದು, ವಿಧಿ ಇಲ್ಲದೇ ಗುಂಡಿ ತೆಗೆದು ಅನ್ನವನ್ನೇ ಮಣ್ಣು ಮಾಡಿದ್ದಾರೆ. ಅದೂ ಕೂಡ ಜೆಸಿಬಿ ಮೂಲಕ ಗುಂಡಿ ತೋಡಿ ಸಮಾವೇಶ ಮಾಡಿದ ಜಾಗದಲ್ಲೇ ಅನ್ನ ಮಣ್ಣು ಮಾಡಿದ ಬಿಜೆಪಿ ನಾಯಕರ ನಡೆಗೆ ಈಗ ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅನ್ನವನ್ನು ಮಣ್ಣು ಮಾಡಿದ ಆಯೋಜಕರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ವ್ಯಕ್ತವಾಗುತ್ತಿದೆ.
ಅಲ್ಲದೆ ಹತ್ತಾರು ಬಡ ಕುಟುಂಬ ವರ್ಷಪೂರ್ತಿ ಈ ಆಹಾರದಿಂದ ನೆಮ್ಮದಿಯಾಗಿ ಬದುಕು ಸಾಗಿಸುತ್ತಿತ್ತು ಎಂದು ಪ್ರಜ್ಞಾವಂತ ಜನರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ.