ಬನ್ನೂರು: ಹೋಬಳಿಯ ಬೀಡನಹಳ್ಳಿಯ ಶ್ರೀ ನಂದಿಬಸವೇಶ್ವರ ಸ್ವಾಮಿಯ 11ನೇ ಕೊಂಡ ಮಹೋತ್ಸವ ಸೋಮವಾರ ಮುಂಜಾನೆ 6ರಿಂದ 6. 45ರವರೆಗೆ ವಿಜೃಂಭಣೆಯಿಂದ ನೆರವೇರಿತು.
ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದ ಶ್ರೀ ನಂದಿಬಸವೇಶ್ವರ ಸ್ವಾಮಿಯ ಕೊಂಡವನ್ನು ಕಾಶಿವೇಷಧಾರಿ ಮಹದೇವಸ್ವಾಮಿ ಅವರು ಗಜಗಾಂಭೀರ್ಯದಿಂದ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್ ಅವರು ಕೂಡ ಈಬಾರಿ ಭಾರಿ ನಿಧಾನವಾಗಿ ಕೊಂಡ ಹಾಯುವ ಮೂಲಕ ಭಕ್ತರಲ್ಲಿ ಭಕ್ತಿಯ ಸೆಲೆಯನ್ನು ಮೂಡಿಸಿದರು.
ಇನ್ನು ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಶ್ರೀಸ್ವಾಮಿಯ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಯೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.
ಗುರುಸ್ವಾಮಿ ಅವರ ಮನೆಯಲ್ಲಿ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳಿಗೆ ಹೂ ಹೊಂಬಾಳೆ ಮಾಡಿದ ನಂತರ ಶ್ರೀಸ್ವಾಮಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಚುಚ್ಚಿಸಿಕೊಂಡರು. ಈ ವೇಳೆ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣ ತಲುಪಿದರು. ರಾತ್ರಿಯಿಡಿ ಹುಣಸೆ ಕಟ್ಟಿಗೆಗಳನ್ನು ಸುಟ್ಟು ಬೇಸಿಗೆ ಸೂರ್ಯನನ್ನು ಮೀರಿಸುವಂತೆ ಸಿದ್ಧಗೊಳಿಸಿದ್ದ ಕೊಂಡದ ಬಳಿ ಎಲ್ಲರೂ ಬಂದು ಸೇರಿದರು.
ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿ ಶ್ರೀಸ್ವಾಮಿಗೆ ಭಕ್ತಿಯಿಂದ ನಮಿಸಿದರು. ಇನ್ನು ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆರವುಗೊಳಿಸಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇವಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್ ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದನ್ನು ಪ್ರತಿಯೊಬ್ಬರೂ ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ತಮ್ಮ ಕಣ್ಣುಗಳಿಂದ ತುಂಬಿಕೊಂಡು ಬೀಡನಹಳ್ಳಿಯ ಶ್ರೀ ನಂದಿಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ಇನ್ನು ಭಾನುವಾರ ಬಂಡಿಯುತ್ಸವ ನಡೆಯಿತು. ಇಂದು ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತು. ಒಟ್ಟಾರೆ ಕಳೆದ ಹತ್ತು ವರ್ಷದಲ್ಲೇ ಇಂದು ನಡೆದ 11ನೇ ಕೊಂಡೋತ್ಸವ ಭಾರಿ ವಿಜೃಂಭಣೆಯಿಂದ ಕೂಡಿತ್ತು.