ರಾಮನಗರ: ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿ ಫುಲ್ ಶಾಕ್ ಆದ ಘಟನೆ ರಾಮನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು! ಎಟಿಎಂನಲ್ಲಿ 500 ರೂಪಾಯಿ ನೋಟಿನ ಬದಲಿಗೆ 20 ರೂಪಾಯಿಯ ನೋಟುಗಳು ಡ್ರಾ ಆಗಿವೆ. 500 ರೂಪಾಯಿ ನೋಟಿನ ಮಧ್ಯೆ 20 ರೂಪಾಯಿ ನೋಟುಗಳನ್ನು ನೋಡಿ ಯುವತಿ ಶಾಕ್‌ಗೆ ಒಳಗಾಗಿದ್ದಾರೆ.
ಬಸ್ ನಿಲ್ದಾಣದಲ್ಲಿರುವ ಇಂಡಿಯಾ 1 ಎಟಿಎಂಗೆ ಹೋದ ಯುವತಿ 5 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಈ ವೇಳೆ ATMನಲ್ಲಿ 4 ಸಾವಿರ ರೂಪಾಯಿವರೆಗೆ 500 ನೋಟುಗಳು ಬಂದಿದೆ. ಉಳಿದ 1 ಸಾವಿರಕ್ಕೆ 500 ರೂ. ನೋಟಿನ ಬದಲಿಗೆ 20 ರೂ.ಗಳ ಎರಡು ನೋಟುಗಳು ಬಂದಿವೆ.
ನಾಲ್ಕು ಸಾವಿರ ಹಣದ ಜೊತೆಗೆ ಉಳಿದ 1 ಸಾವಿರ ರೂಪಾಯಿಗೆ ಕೇವಲ ಎರಡು 20 ರೂಪಾಯಿ ಮುಖಬೆಲೆಯ ನೋಟುಗಳು ಬಂದಿದ್ದು, 5000 ರೂಪಾಯಿ ಬದಲಿಗೆ 4040 ರೂಪಾಯಿ ಡ್ರಾ ಆಗಿದೆ. 500ರ ಬದಲಿಗೆ 20 ರೂ. ನೋಟ್ ನೋಡಿ ಉಳಿದ ಗ್ರಾಕರೂ ಕೂಡ ಶಾಕ್ ಆಗಿದ್ದಾರೆ.
ಎಟಿಎಂನಲ್ಲಿ ಈ ಯಡವಟ್ಟು ಆದ ಬಳಿಕ ಸಾರ್ವಜನಿಕರು ತಮ್ಮ ಎದುರಿನಲ್ಲೇ ATM ಬಾಕ್ಸ್ ಓಪನ್ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಹಣ ಸರಿಪಡಿಸುವಂತೆ ಎಟಿಎಂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಆ ಬಳಿಕ ATM ಸಿಬ್ಬಂದಿಗಳು ಆಗಿರುವ ಪ್ರಾಮಾದಕ್ಕೆ ಕ್ಷಮೆ ಕೇಳಿ ಇನ್ನು 960 ರೂಪಾಯಿಯನ್ನು ವಾಪಸ್ ಮಾಡುವುದಾಗಿ ಹೇಳಿದ ಬಳಿಕ ಸಾರ್ವಜನಿಕರು ಸುಮ್ಮನಾಗಿದ್ದಾರೆ. ಎಟಿಎಂಗೆ ಹೋದಾಗ ಹಣ ಸರಿ ಇದೆಯೇ ಎಂದು ಎಟಿಎಂ ಒಳಗೆ ಲೆಕ್ಕ ಮಾಡಿದರೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನಿಮಗೆ ಒಂದು ವೇಳೆ ಮೋಸವಾಗಿದ್ದರೆ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಹೀಗಿ ಒಂದು ಬಾರಿ ಡ್ರಾ ಮಾಡಿಕೊಂಡ ಹಣವನ್ನು ಪರಿಶೀಲಿಸುವುದು ಒಳ್ಳೆಯದು.