ನ್ಯೂಡೆಲ್ಲಿ: ಮಳೆ ನೀರು ಮನೆಗೆ ನುಗ್ಗಿ, ನಷ್ಟವಾದರೆ ಅದಕ್ಕೆ ಕಾರ್ಪೊರೇಷನ್ ಹೊಣೆ ಎಂದು ಹೇಳೀರುವ ದೆಹಲಿ ಹೈಕೋರ್ಟ್ 9ಲಕ್ಷ ರೂ. ಪರಿಹಾರ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ಕಳೆದ 12 ವರ್ಷದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಈ ತೀರ್ಪು ನೀಡಿ ಆದೇಶ ಹೊರಡಿಸಿರುವ ಕೋರ್ಟ್, ಸರಿಯಾದ ಚರಂಡಿಗಳನ್ನು ನಿರ್ಮಿಸಿ, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುನ್ಸಿಪಲ್ ಕಾರ್ಪೊರೇಷನ್‌ನ ಕರ್ತವ್ಯ ಎಂದು ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದೆ.
2010 ರಲ್ಲಿ ಬಿದಿದ್ದ ಭಾರೀ ಮಳೆಯಿಂದ ಚರಂಡಿ ನೀರು ಮನೆಗೆ ನುಗ್ಗಿ ಅಪಾರ ನಷ್ಟವಾಗಿತ್ತು. ಹೀಗಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಕರ್ತವ್ಯ ಲೋಪ ಪ್ರಶ್ನಿಸಿ ಲೀಲಾ ಮಾಥುರ್ ಎಂಬುವರು ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಅವರು ದಾವೆಯಲ್ಲಿ ವಿವರಿಸಿದ್ದು, ಪಶ್ಚಿಮ ದೆಹಲಿಯಲ್ಲಿ ತಮ್ಮ ಮನೆ ನಿರ್ಮಿಸಿದಾಗ ಅದು ರಸ್ತೆಯ ಮಟ್ಟದಲ್ಲಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹಲವು ಬಾರಿ ರಸ್ತೆ ಪುನರ್‌ನಿರ್ಮಾಣದ ನಂತರ ರಸ್ತೆಯ ಮಟ್ಟವು ಏರಿ, ಮನೆ ತಗ್ಗು ಪ್ರದೇಶದಲ್ಲಿ ಉಳಿಯುವಂತೆ ಅಧಿಕಾರಿಗಳು ಮಾಡಿದ್ದಾರೆ. ಇದರಿಂದ ಮಾನ್ಸೂನ್ ಮಳೆಯ ವೇಳೆ ಮನೆಗೆ ನೀರು ನುಗ್ಗಿದೆ. ಸಮಸ್ಯೆಯನ್ನು ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಸುದೀರ್ಘವಾಗಿ ಪ್ರಕರಣ ವಿಚಾರಣೆ ನಡೆದ ಬಳಿಕ ಮಂಗಳವಾರ ತೀರ್ಪು ನೀಡಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ದ್ವಿ ಸದಸ್ಯ ಪೀಠ, ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಖರ ಉದ್ದೇಶಕ್ಕಾಗಿ ರಚಿತವಾದ ಮುನ್ಸಿಪಲ್ ಕಾರ್ಪೊರೇಷನ್ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಎಂಸಿಡಿ ತನ್ನ ಕಾರ್ಯವೈಖರಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದರಿಂದ, ಮೇಲ್ಮನವಿದಾರರಿಗೆ ಸಂಪೂರ್ಣ ನ್ಯಾಯ ಒದಗಿಸಬೇಕು. ಹೀಗಾಗಿ ಪರಿಹಾರ ಹಣವನ್ನು 3 ಲಕ್ಷ ರೂ.ಗಳಿಂದ 9 ಲಕ್ಷ ರೂ.ಗೆ ಏರಿಸಬೇಕು ಎಂದು ಆದೇಶ ನೀಡಿತು.
ಇದಕ್ಕೂ ಮುನ್ನ ಪ್ರತಿವಾದ ಮಂಡಿಸಿದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪರ ವಕೀಲರು, ನೀರಿನ ಚರಂಡಿಗಳು ಮುಚ್ಚಿಹೋಗಿರುವುದರಿಂದ ಎಂಸಿಡಿಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಿಸುವಲ್ಲಿ ಶೋಚನೀಯವಾಗಿ ಸಂಸ್ಥೆ ವಿಫಲವಾಗಿದೆ ಎಂದು ಹೇಳಿದರು.
ಅಲ್ಲದೆ ಒಂದರ ಮೇಲೊಂದರಂತೆ ರಸ್ತೆಗಳನ್ನು ಹಾಕಿದ್ದು, ಇದು ರಸ್ತೆಯ ಎತ್ತರವನ್ನು ಹೆಚ್ಚಿಸಿದೆ. ಎಂಸಿಡಿಯು ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಮಳೆ ನೀರಿನ ಚರಂಡಿಗಳಿವೆ ಎಂದು ಖಚಿತಪಡಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಆದರೆ, ಮುನ್ಸಿಪಲ್ ಕಾರ್ಪೊರೇಷನ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿತು.