ಬನ್ನೂರು: ಕಾವೇರಿ ನದಿ ಬಂಡೆಯ ಮೇಲೆ ನೆಲೆಸಿರುವ ಬೀಡನಹಳ್ಳಿ ಗ್ರಾಮದ ಧರ್ಮಕ್ಷೇತ್ರ ಶ್ರೀ ನಂದಿಬಸವೇಶ್ವರ ಸ್ವಾಮಿಯ 14ನೇ ಕೊಂಡ ಮಹೋತ್ಸವ ಸೋಮವಾರ ಫೆ.23ರ ಮುಂಜಾನೆ 6ರಿಂದ 6.45ರವರೆಗೆ ವಿಜೃಂಭಣೆಯಿಂದ ನೆರವೇರಿತು.

ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದ ಅನ್ನಾದಾನಪ್ರಭು ಶ್ರೀ ನಂದಿಬಸವೇಶ್ವರ ಸ್ವಾಮಿಯ ಕೊಂಡವನ್ನು ಕಾಶಿವೇಷಧಾರಿ ಮಹದೇವಸ್ವಾಮಿ ಅವರು ಗಜಗಾಂಭೀರ್ಯದಿಂದ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡ ಹಾಗೂ ರಾಜೇಶ್ ಅವರು ಕೂಡ ಈಬಾರಿ ನಿಧಾನವಾಗಿ ಕೊಂಡ ಹಾಯುವ ಮೂಲಕ ಭಕ್ತರಲ್ಲಿ ಭಕ್ತಿಯ ಸೆಲೆ ಮೂಡಿಸಿದರು.
ಇನ್ನು ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಶ್ರೀಸ್ವಾಮಿಯ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಯೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.
ಗುರುಸ್ವಾಮಿ ಅವರ ಮನೆಯಲ್ಲಿ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳಿಗೆ ಹೂ ಹೊಂಬಾಳೆ ಮಾಡಿದ ನಂತರ ಶ್ರೀಸ್ವಾಮಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಚುಚ್ಚಿಸಿಕೊಂಡರು. ಬಳಿಕ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣ ತಲುಪಿದರು.
ರಾತ್ರಿಯಿಡಿ ಹುಣಸೆ ಸೌದೆಯಿಂದ (ಕಟ್ಟಿಗೆ) ಬೇಸಿಗೆ ಸೂರ್ಯನನ್ನು ಮೀರಿಸುವಂತೆ ಸಿದ್ಧಗೊಳಿಸಿದ್ದ ಕೊಂಡದ ಬಳಿ ಎಲ್ಲರೂ ಬಂದು ಸೇರಿದರು. ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿ ಶ್ರೀಸ್ವಾಮಿಗೆ ಭಕ್ತಿಯಿಂದ ನಮಿಸಿದರು.
ಇನ್ನು ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆರವುಗೊಳಿಸಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇವಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೇಗೌಡ ಹಾಗೂ ರಾಜೇಶ್ ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದನ್ನು ಪ್ರತಿಯೊಬ್ಬರೂ ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರರಾದರು.
ಭಾನುವಾರ ಬಂಡಿಯುತ್ಸವ ನಡೆಯಿತು. ಇಂದು ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತು. ಒಟ್ಟಾರೆ ಕಳೆದ 13 ವರ್ಷದಲ್ಲೇ ಇಂದು ನಡೆದ 14ನೇ ಕೊಂಡೋತ್ಸವ ಭಾರಿ ವಿಜೃಂಭಣೆಯಿಂದ ಕೂಡಿತ್ತು.
Related











The detailed description of the Konda ceremony and the procession paints a vivid picture of the spiritual atmosphere that enveloped Beedanahalli. It’s remarkable how such rituals have stood the test of time and continue to unite generations.