NEWSದೇಶ-ವಿದೇಶನಮ್ಮರಾಜ್ಯ

ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ಗೆ 60 ರೂ. ಹೆಚ್ಚಿಸಿ ಗ್ರಾಹಕರಿಗೆ ಬಿಗ್ ಶಾಕ್: ಹೊಸ ದರ ಇಂದಿನಿಂದಲೇ ಜಾರಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿದ್ದು, ದೇಶೀಯ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಇಂದಿನಿಂದಲೇ (ಮಾರ್ಚ್ 7) ಜಾರಿಗೆ ಬರಲಿವೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನೇರ ಪರಿಣಾಮ ಭಾರತದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಇನ್ನು 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಬೆಲೆ ಈಗ ದೇಶಾದ್ಯಂತ 60 ರೂ. ಹೆಚ್ಚಾಗಿದ್ದು, 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್​ ಬೆಲೆ 115 ರೂ.ಗಳಷ್ಟು ಏರಿಕೆಯಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ಪ್ರಕಾರ, ಈ ಹಿಂದೆ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ 853 ರೂ. ಆಗಿತ್ತು. ಆದರೆ, ಈಗ 913 ರೂ. ನಿಗದಿಯಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದೆ.

ಈ ಹಿಂದೆ ಮುಂಬೈನಲ್ಲಿ, ಎಲ್‌ಪಿಜಿ ಸಿಲಿಂಡರ್‌ ಬೆಲೆ 852.50 ರೂ. ಆಗಿತ್ತು, ಈಗ 912.50 ರೂ. ಆಗಿದೆ. ಕೋಲ್ಕತ್ತಾದಲ್ಲಿ 930 ರೂಪಾಯಿ, ಚೆನ್ನೈನಲ್ಲಿ 928.50 ರೂ.ಗಳಿಗೆ ಏರಿಕೆಯಾಗಿದೆ.

2016 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿರುವ 10 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ಬೆಲೆ ಏರಿಕೆಯ ಬಿಸಿ ಅಷ್ಟಾಗಿ ತಟ್ಟುವುದಿಲ್ಲ. ಬದಲಿಗೆ ಪ್ರತಿ 14.2 ಕೆಜಿ ಸಿಲಿಂಡರ್ ಮೇಲೆ 300 ರೂ.ಗಳ ನೇರ ಸಬ್ಸಿಡಿಯನ್ನು ಪಡೆಯುವುದು ಮುಂದುವರಿದಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾದ ಮಿಲಿಟರಿ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,768.50 ರೂ.ಗಳಿಂದ 1,883 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1,720.50 ರೂ.ಗಳಿಂದ 1,835 ರೂ.ಗಳಿಗೆ ಹೆಚ್ಚಾಗಿದ್ದು, ಕೋಲ್ಕತ್ತಾದಲ್ಲಿ 1,990 ರೂ.ಗಳಿಗೆ ಏರಿಕೆ ಕಂಡುಬಂದಿದೆ. ಆದಾಗ್ಯೂ, ಚೆನ್ನೈನಲ್ಲಿ 1,929 ರೂ.ಗಳಿಂದ 2,043.50 ರೂ.ಗಳಿಗೆ ಏರಿಕೆಯಾಗಿದೆ.

ಇತ್ತೀಚಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ದೇಶದಲ್ಲಿ ಯಾವುದೇ ರೀತಿಯ ಇಂಧನ ಕೊರತೆ ಉಂಟಾಗುವುದಿಲ್ಲ. ಗ್ರಾಹಕರು ಪೂರೈಕೆಯಲ್ಲಿನ ಅಡಚಣೆಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ನಮ್ಮ ನಾಗರಿಕರಿಗೆ ಕೈಗೆಟುಕುವ ಮತ್ತು ಸುಸ್ಥಿರ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಹಾಗಾಗಿ ನಾವು ಅದನ್ನು ಸುಲಭವಾಗುವ ರೀತಿಯಲ್ಲಿ ಮಾಡುತ್ತಿದ್ದೇವೆ. ಭಾರತದಲ್ಲಿ ಇಂಧನದ ಕೊರತೆಯಿಲ್ಲ ಮತ್ತು ಗ್ರಾಹಕರಿಗೆ ಆರಾಮವಾಗಿರಿ ಎಂದು X ನಲ್ಲಿ ಪೋಸ್ಟ್‌ ಮಾಡಿದ್ದರು.

ಆದರೆ, ಈಗ ದಿಢೀರ್‌ 60 ರೂಪಾಯಿ ಹಾಗೂ 115 ರೂ.ಗಳನ್ನು ಏರಿಸುವ ಮೂಲಕ ಗೃಹ ಬಳಕೆ ಹಾಗೂ ವಾಣಿಜ್ಯ ಇಬ್ಬರರ ಜೇಬಿಗೂ ಕತ್ತರಿಹಾಕುತ್ತಿರುವುದು ಮಾತ್ರ ಸುಳ್ಳಲ್ಲ ಕಣ್ಡ್ರೀ..!

Megha
the authorMegha

Leave a Reply

error: Content is protected !!