- ಒಂದು ತಿಂಗಳೊಳಗೆ 2 ಬಾರಿ ಏರಿಕೆ- 300 ರೂ. ಹೆಚ್ಚಳ
ನ್ಯೂಡೆಲ್ಲಿ: ಈಗಾಗಲೇ ಏಪ್ರಿಲ್ ತಿಂಗಳು ದುಬಾರಿ ತಿಂಗಳು ಎಂದೇ ಕರೆಯಲಾಗುತ್ತಿದೆ. ಇದರ ಬೆನ್ನಲ್ಲಿಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹಣಕಾಸು ವರ್ಷದ ಮೊದಲ ದಿನವೇ ದೇಶದ ಜನತೆಗೆ ಬಿಗ್‌ಶಾಕ್ ಕೊಟ್ಟಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಾದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 195.50 ರೂ. ಏರಿಕೆ ಮಾಡಿವೆ. ಈ ಮೂಲಕ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 2078.50 ರೂಪಾಯಿ ತಲುಪಿದೆ.
ಇದಕ್ಕೂ ಮೊದಲು, ಮಾರ್ಚ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನ 114.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈಗ ಮತ್ತೆ 195.50 ರೂಪಾಯಿಗೆ ಏರಿಕೆ ಮಾಡುವ ಮೂಲಕ ಕಳೆದ ಒಂದು ತಿಂಗಳಲ್ಲೇ 2ನೇ ಬಾರಿಗೆ ಶಾಕ್‌ಕೊಟ್ಟಿದೆ ಕೇಂದ್ರ ಸರ್ಕಾರ.
ಸದ್ಯ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದ್ದು ಈಗಿನ ದರವೇ ಮುಂದುವರಿದಿದೆ. 14.2 ಕೆಜಿ ಸಿಲಿಂಡರ್ ಬೆಲೆ ಮಾ.7 ರಂದು ಕೊನೆಯದ್ದಾಗಿ 60 ರೂ. ಹೆಚ್ಚಳವಾಗಿತ್ತು. ದೆಹಲಿಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂ. ಇದ್ದರೆ ಕರ್ನಾಟಕದಲ್ಲಿ 915.50 ರೂ.ಗೆ ಮಾರಾಟವಾಗುತ್ತಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರಗಳ ಆಧಾರದ ಮೇಲೆ ಪ್ರತಿ ತಿಂಗಳ ಮೊದಲ ದಿನದಂದು ATF ಮತ್ತು LPG ಬೆಲೆಗಳನ್ನು ಪರಿಷ್ಕರಿಸುತ್ತವೆ.
ಮೊದಲೇ ಸಿಲಿಂಡರ್ ಸಿಗ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ಪರದಾಡುತ್ತಿದ್ದಾರೆ. ಈ ನಡುವೆಯೇ ಬೆಲೆ ಏರಿಕೆ ಮಾಡಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.
Related










