KSRTC: ನಾಲ್ಕೂ ನಿಗಮಗಳ ಬಸ್ ಕಿಟಕಿಗಳಿಗೆ ರಾಡ್ ಅಳವಡಿಸಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮೋಹನ್ ಕುಮಾರ್ ದಾನಪ್ಪ
ಕೆಲವರಿಗೆ ಬಸ್ನಲ್ಲಿ ಪ್ರಯಾಣ ಮಾಡಿದರೆ ವಾಂತಿಯಾಗುತ್ತದೆ. ಅಂಥವರು ಕಡ್ಡಾಯವಾಗಿ ಒಂದು ಕವರ್ ತೆಗೆದುಕೊಂಡು ಹೋಗಿ ವಾಮಿಟಿಂಗ್ ಆದರೆ ಆ ಕವರ್ನಲ್ಲಿ ಮಾಡಿ ಅದನ್ನು ಕಸದ ಬುಟ್ಟಿಗೆ ಹಾಕಬೇಕು. ಇದರಿಂದ ಯಾವುದೇ ಸಮಸ್ಯೆ ಆಗದಂತೆ ನಿಗಮಗಳ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಂದರೆ KSRTC, BMTC, NWKRTC, KKRTC ಎಲ್ಲ ಬಸ್ಗಳ ಕಿಟಕಿಗಳಿಗೂ ಕಡ್ಡಾಯವಾಗಿ ಕಬ್ಬಿಣದ ಸರಳುಗಳನ್ನು (Iron Bars) ಅಳವಡಿಸುವಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸೂಚನೆ ನೀಡಿದೆ.
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿ ಸಾರಿಗೆ ಇಲಾಖೆಗೆ ಅಧಿಕೃತ ಪತ್ರ ರವಾನಿಸಿದ್ದಾರೆ.
ಮೊನ್ನೆ ಬಸ್ನಲ್ಲಿ ಪ್ರಯಾನಿಸುತ್ತಿದ್ದ ವೇಳೆ ಬಸ್ನ ಕಿಟಕಿ ಮೂಲಕ ತಲೆ ಹೊರಗಾಕಿ ಗುಟ್ಕಾ ಉಗುಳಲು ಹೋಗಿ ವಿದ್ಯಾರ್ಥಿಯೊಬ್ಬ ಭೀಕರವಾಗಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ರಾಜ್ಯ ಸರ್ಕಾರಿ ಬಸ್ಗಳ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಈ ಮಹತ್ವದ ಹೆಜ್ಜೆ ಇಡಲಾಗಿದೆ.
ಆ ಭೀಕರ ದುರಂತದಿಂದ ಈ ನಿರ್ಧಾರ: ಇತ್ತೀಚೆಗೆ ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕ್ಕಿರೇಶ (17) ಎಂಬಾತ ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೀಶ್ವರಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NWKRTC) ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗುಟ್ಕಾ ಉಗುಳಲು ಬಸ್ನ ಹಿಂಬದಿ ಸೀಟಿನ ಕಿಟಕಿಯಿಂದ ತಲೆ ಹೊರಹಾಕಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಆತನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿತ್ತು.
ಆ ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿಯ ತಲೆ ದೇಹದಿಂದ ಬೇರ್ಪಟ್ಟು ರಸ್ತೆಗೆ ಬಿದ್ದ ರಕ್ತಸಿಕ್ತ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರಾಧಿಕಾರ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಸೂಚನೆ ನೀಡಿದೆ.
ಒತ್ತಾಯಗಳು ಏನು?: ಪ್ರಯಾಣಿಕರು ಯಾವುದೇ ಕಾರಣಕ್ಕೂ ತಲೆ ಅಥವಾ ಕೈಗಳನ್ನು ಹೊರಚಾಚದಂತೆ ಬಸ್ಗಳ ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕು. ಇನ್ನು ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಗಮಗಳ ಬಸ್ಗಳಲ್ಲಿ ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಕರ್ನಾಟಕ ತಂಬಾಕು ಉತ್ಪನ್ನಗಳ ತಿದ್ದುಪಡಿ ವಿಧೇಯಕ-2024 ಮತ್ತು ‘ಕೋಟ್ಪಾ’ (COTPA) ಕಾಯಿದೆಯನ್ನು ಬಸ್ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಸ್ ಪ್ರಯಾಣದ ವೇಳೆ ಧೂಮಪಾನ, ಗುಟ್ಕಾ ಹಾಗೂ ತಂಬಾಕು ಸೇವಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇನ್ನು ಕೆಲವರಿಗೆ ಬಸ್ನಲ್ಲಿ ಪ್ರಯಾಣ ಮಾಡಿದರೆ ವಾಂತಿಯಾಗುತ್ತದೆ. ಅಂಥವರು ಕಡ್ಡಾಯವಾಗಿ ಒಂದು ಕವರ್ ತೆಗೆದುಕೊಂಡು ಹೋಗಿ ವಾಮಿಟಿಂಗ್ ಆದರೆ ಆ ಕವರ್ನಲ್ಲಿ ಮಾಡಿ ಅದನ್ನು ಕಸದ ಬುಟ್ಟಿಗೆ ಹಾಕಬೇಕು. ಇದರಿಂದ ಯಾವುದೇ ಸಮಸ್ಯೆ ಆಗದಂತೆ ನಿಗಮಗಳ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಪ್ರಜ್ಞಾವಂತ ನಾಗರಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.







