4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ
ಕನಿಷ್ಠ ಮೂಲ ವೇತನಕ್ಕೆ ಸರಿದೂಗಿಸಲು ಕ್ರಮ: 2025ರ ಮಾರ್ಚ್ 31ರಲ್ಲಿದ್ದ ಮೂಲ ವೇತನಕ್ಕೆ ಶೇ 12.50ರಷ್ಟನ್ನು ಕುಟುಂಬ ಯೋಜನೆಯ ವಿಶೇಷ ಭತ್ಯೆಯನ್ನು ಹೊರತುಪಡಿಸಿ ಕೂಡಿಸಲಾಗುವುದು. ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ಅದಕ್ಕೆ ಅನುಗುಣವಾಗಿ ಮೊತ್ತ ಸೇರಿಸಲಾಗುವುದು.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಕಳೆದ ಮೇ 12ರಂದು ಆದೇಶ ಹೊರಡಿಸಿದಂತೆ ಇದೇ ಜುಲೈ ತಿಂಗಳ ವೇತನದಲ್ಲಿ ಶೇ.12.5ರಷ್ಟು ಮೂಲವೇತನ ಹೆಚ್ಚಿಸಿ ಅನುಷ್ಠಾನಗೊಳಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಇದೇ ಜುಲೈ ತಿಂಗಳಿನಲ್ಲಿ ಶೇ.12.5ರಷ್ಟು ಮೂಲ ವೇತನ ಹೆಚ್ಚಿಸಿ ಅನುಷ್ಠಾನಗೊಳಿಸುತ್ತಿರುವುದರಿಂದ ಸಾರಿಗೆ ನೌಕರರ ಮೂಲ ವೇತನ ಹೆಚ್ಚಳವಾಗಲಿದೆ. ಸರ್ಕಾರ ನಾಲ್ಕೂ ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ನೌಕರರ ಮೂಲ ವೇತನವನ್ನು ಶೇ.12.5ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಜುಲೈ ತಿಂಗಳ ವೇತನದಲ್ಲಿ ಪರಿಷ್ಕೃತ ವೇತನ ಜಾರಿಗೆ ಬರುವಂತೆ ಪಾವತಿಸಲು ಸರ್ಕಾರ ಅಂದು ಆದೇಶ ಹೊರಡಿಸಿದ್ದು, ಹೊಸ ವೇತನ ಪರಿಷ್ಕರಣೆಯು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ. ಈಗಾಗಲೇ ನೌಕರರಿಗೆ ಪಾವತಿಸಬೇಕಿದ್ದ ಹಳೆಯ ವೇತನ ಹಿಂಬಾಕಿಯ ಮೊದಲ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈಗಲೂ ನೌಕರರ ಚಿತ್ತಸರಿಸಮಾನವಾದ ವೇತನದತ್ತ: ಈ ಹೆಚ್ಚಳದಿಂದಾಗಿ ರಾಜ್ಯದ ಸುಮಾರು 1.15 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರ ತಿಂಗಳಿಗೆ ಹೆಚ್ಚುವರಿಯಾಗಿ 72.80 ಕೋಟಿ ರೂ. ಭರಿಸಬೇಕಿದೆ. ಆದರೆ, ಈ ಹೆಚ್ಚಳ ಶ್ರಮಿಕ ವರ್ಗದ ಸಾರಿಗೆ ಅಧಿಕಾರಿಗಳು/ ನೌಕರರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಈಗಲೂ ನಮಗೆ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಕೊಡಿ ಎಂಬ ಬೇಡಿಕೆಯನ್ನು ಸರ್ಕಾರ ಹಾಗೂ ಸಾರಿಗೆ ಆಡಳಿತ ಮಂಡಳಿ ಮುಂದೆ ಇಡುತ್ತಲೇ ಇದ್ದಾರೆ.
ಇನ್ನು ಪರಿಷ್ಕೃತ ವೇತನವನ್ನು ಶ್ರೇಣಿಗಳಿಗೆ ಸರಿಯಾಗಿ ನಿಗದಿ ಮಾಡುವ ವಿಧಾನದ ಬಗ್ಗೆಯೂ ಕೆಎಸ್ಆರ್ಟಿಸಿಯ ಮುಖ್ಯ ಲೆಕ್ಕಾಧಿಕಾರಿ ಆಂತರಿಕ ಸುತ್ತೋಲೆ ಹೊರಡಿಸಿದ್ದಾರೆ.
ಕನಿಷ್ಠ ಮೂಲ ವೇತನಕ್ಕೆ ಸರಿದೂಗಿಸಲು ಕ್ರಮ: 2025ರ ಮಾರ್ಚ್ 31ರಲ್ಲಿದ್ದ ಮೂಲ ವೇತನಕ್ಕೆ ಶೇ 12.50ರಷ್ಟನ್ನು ಕುಟುಂಬ ಯೋಜನೆಯ ವಿಶೇಷ ಭತ್ಯೆಯನ್ನು ಹೊರತುಪಡಿಸಿ ಕೂಡಿಸಲಾಗುವುದು. ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ಅದಕ್ಕೆ ಅನುಗುಣವಾಗಿ ಮೊತ್ತ ಸೇರಿಸಲಾಗುವುದು.
ಇನ್ನು ಪರಿಷ್ಕೃತ ಮೊತ್ತ ಸೇರಿಯೂ ಕನಿಷ್ಠ ಮೂಲ ವೇತನಕ್ಕಿಂತ ಕಡಿಮೆ ಇದ್ದರೆ, ಅಂಥವರ ವೇತನವನ್ನು ಕನಿಷ್ಠ ಮೂಲ ವೇತನಕ್ಕೆ ಸರಿದೂಗಿಸಲಾಗುವುದು. ಮೊತ್ತವು ಹುದ್ದೆಯ ಹಂತದಲ್ಲಿ ಅಥವಾ ಎರಡು ಹಂತಗಳ ಮಧ್ಯದಲ್ಲಿದ್ದರೆ ವೇತನ ಶ್ರೇಣಿಯನ್ನು ಮುಂದಿನ ಹಂತಕ್ಕೆ ನಿಗದಿಪಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಮುಂಬಡ್ತಿ ದೊರೆಯದೇ ಇದ್ದಲ್ಲಿ ಏನು?: ವಾರ್ಷಿಕ ವೇತನ ಬಡ್ತಿಯನ್ನು ಮೂಲವೇತನ ನಿಗದಿಪಡಿಸಿದ ಒಂದು ವರ್ಷದ ನಂತರ ನೀಡಲಾಗುವುದು. ಮುಂಬಡ್ತಿಗೆ ಅವಕಾಶವಿಲ್ಲದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು 15 ವರ್ಷ ಪೂರೈಸಿದ್ದರೆ ಪರಿಷ್ಕೃತ ಉನ್ನತ ಶ್ರೇಣಿಯ ಮೂಲ ವೇತನ ನಿಗದಿಪಡಿಸಲಾಗುವುದು. ಅವಕಾಶವಿದ್ದೂ ಮುಂಬಡ್ತಿ ದೊರೆಯದೇ ಇದ್ದಲ್ಲಿ, ಪರಿಷ್ಕೃತ ಮಧ್ಯವರ್ತಿ ವೇತನ ಶ್ರೇಣಿಯಲ್ಲಿ ಮೂಲ ವೇತನ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದಿಷ್ಟೇ ಅಲ್ಲದೆ ವೇತನ ಪರಿಷ್ಕರಣೆಯ ಹಿಂಬಾಕಿ, ಉಪಧನ, ನಿವೃತ್ತಿ, ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತವನ್ನು ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ PDF ಕೂಡ ನೋಡಬಹುದು: KSRTC PAY FIXATION CIRCULAR 04 DATED 01072026
ಈ ನಡುವೆ ನೌಕರರಿಗೆ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿತ್ತು. ಆದರೆ, ಈಸರ್ಕಾರ ನೌಕರರಿಗೆ ಅನ್ಯಾಯಮಾಡಿ 15 ತಿಂಗಳು ಮುಂದಕ್ಕೆ ಹಾಕಿ ವೇತನ ಹೆಚ್ಚಳ ಮಾಡಿರುವುದು ನಿಯಮಬಾಹಿರವಾಗಿದೆ. ಆದರೆ ಇದನ್ನು ಪ್ರಶ್ನಿಸುವುದಕ್ಕೆ ಸಾರಿಗೆ ಅಧಿಕಾರಿಗಳು/ನೌಕರರು ಮುಂದಾಗುತ್ತಿಲ್ಲ.
ಇನ್ನು ಹಲ್ಲುಕಿತ್ತ ಹಾವಿನಂತಿರುವ ಸಾರಿಗೆ ನೌಕರರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡಿರುವ ಮುಖಂಡರು ಇದರ ಗಂಧಗಾಳಿ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿರುವುದರ ಲಾಭವನ್ನು ಸರ್ಕಾರ ಪಡೆದುಕೊಂಡು ನೌಕರರಿಗೆ ಟೋಪಿಹಾಕಿದೆ ಎಂದೇ ಹೇಳಬಹುದು.







