KSRTC: ‘ಸಾರಿಗೆ ಮಿತ್ರ’ ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್ ಕೊಟ್ಟು ಹಾಜರಿ ಪಡೆಯುತ್ತಿರುವ ಅತೀ ಬುದ್ಧಿವಂತರು!
ಕೆಲವು ನೌಕರರು ತಾವು ಕಚೇರಿಗೆ ಅಥವಾ ಕರ್ತವ್ಯಕ್ಕೆ ಖುದ್ದಾಗಿ ಹಾಜರಾಗದೆ, ತಮ್ಮ ಮೊಬೈಲ್ ಫೋನ್‌ಗಳನ್ನು ಬೇಗ ಬರುವ ಸಹೋದ್ಯೋಗಿ ಕೈಗೆ ಕೊಟ್ಟು, ಆ ಸಹೋದ್ಯೋಗಿ ಆಪ್ ಮೂಲಕ ಇವರ ಪರವಾಗಿ ಹಾಜರಾತಿ ನಮೂದಿಸುತ್ತಿದ್ದಾರೆ ಎಂಬ ಗಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ರೀತಿಯ 'ತಡವಾಗಿ ಬಂದರೂ ಸರಿಯಾದ ಸಮಯಕ್ಕೆ ಹಾಜರಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ‘ಸಾರಿಗೆ ಮಿತ್ರ’ ಆಪ್ ಮತ್ತು HRMS ವ್ಯವಸ್ಥೆ ಹಾಗೂ ನಗದು ಘೋಷಣೆ (Cash Declaration) ಮಾಡುವ ಸಮಯದಲ್ಲಿ ನಡೆಯುತ್ತಿರುವ ದುರುಪಯೋಗ ಹಾಗೂ ನಿಯಮ ಉಲ್ಲಂಘನೆಗಳ ಕುರಿತು ಸಂಸ್ಥೆಯ ನೌಕರರೇ ಆರೋಪ ಮಾಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಂತ್ರಜ್ಞಾನದ ದುರುಪಯೋಗ: ಸಾರಿಗೆ ಸಂಸ್ಥೆಯಲ್ಲಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸುವ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ ‘ಸಾರಿಗೆ ಮಿತ್ರ’ ಆಪ್ ಅನ್ನು ಜಾರಿಗೆ ತರಲಾಗಿದೆ. ಆದರೆ, ತಂತ್ರಜ್ಞಾನದ ಸುಧಾರಿತ ವ್ಯವಸ್ಥೆಯನ್ನೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ.
ಪ್ರಾತಿನಿಧಿಕ ಹಾಜರಾತಿ (Proxy Attendance) ದಂಧೆ: ಕೆಲವು ನೌಕರರು ತಾವು ಕಚೇರಿಗೆ ಅಥವಾ ಕರ್ತವ್ಯಕ್ಕೆ ಖುದ್ದಾಗಿ ಹಾಜರಾಗದೆ, ತಮ್ಮ ಮೊಬೈಲ್ ಫೋನ್‌ಗಳನ್ನು ಬೇಗ ಬರುವ ಸಹೋದ್ಯೋಗಿ ಕೈಗೆ ಕೊಟ್ಟು, ಆ ಸಹೋದ್ಯೋಗಿ ಆಪ್ ಮೂಲಕ ಇವರ ಪರವಾಗಿ ಹಾಜರಾತಿ ನಮೂದಿಸುತ್ತಿದ್ದಾರೆ ಎಂಬ ಗಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ರೀತಿಯ ‘ತಡವಾಗಿ ಬಂದರೂ ಸರಿಯಾದ ಸಮಯಕ್ಕೆ ಹಾಜರಾಗಿದ್ದೇವೆ ಎಂದು ತೋರಿಸಿಕೊಳ್ಳುವ ವ್ಯವಸ್ಥೆಯು ನಿಗಮದ ನಿಯಮಾವಳಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಕರ್ತವ್ಯ ಲೋಪ ಮತ್ತು ಗೈರುಹಾಜರಿ: ನೌಕರರು ಎಲ್ಲೋ ಇದ್ದುಕೊಂಡು ತಮ್ಮ ಹಾಜರಾತಿಯನ್ನು ತಮ್ಮ ಮೊಬೈಲ್ಅನ್ನು ಮತ್ತೊಬ್ಬರಿಗೆ ಕೊಟ್ಟು ಆ ಮೂಲಕ ‘ಸಾರಿಗೆ ಮಿತ್ರ’ ಆಪ್‌ನಲ್ಲಿ ಹಾಜರಾತಿ ಪಡೆಯುತ್ತಿದ್ದಾರೆ. ಇನ್ನು ಇವರು ಕರ್ತವ್ಯದ ಸಮಯದಲ್ಲಿ ನಿಯೋಜಿತ ಸ್ಥಳದಲ್ಲಿ ಇರುವುದಿಲ್ಲ. ಇದು ಕೇವಲ ತಾಂತ್ರಿಕ ವಂಚನೆಯಷ್ಟೇ ಅಲ್ಲದೆ, ಸಾರ್ವಜನಿಕ ಸೇವೆಗೆ ಧಕ್ಕೆ ತರುವ ಮತ್ತು ಸಂಸ್ಥೆಗೆ ಆರ್ಥಿಕ ನಷ್ಟ ಉಂಟುಮಾಡುವ ಗಂಭೀರ ಕರ್ತವ್ಯ ಲೋಪವಾಗಿದೆ.
HRMS ನಿಯಮಗಳ ಸಂಪೂರ್ಣ ಉಲ್ಲಂಘನೆ: ಕಚೇರಿಗೆ ಬರುವ ಮತ್ತು ಹೋಗುವ ನಿಖರ ಸಮಯವನ್ನು ದಾಖಲಿಸಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಯಲ್ಲಿ ‘ಇನ್ ಮತ್ತು ಔಟ್’ (In and Out) ಸಮಯವನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ. ಆದರೆ, ನೌಕರರು ತಮಗೆ ಇಷ್ಟಬಂದ ಸಮಯದಲ್ಲಿ ಬಂದು, ಈ ರೀತಿ ತಂತ್ರಜ್ಞಾನವನ್ನು ಬಳಸಿಕೊಂಡು ತಪ್ಪು ಸಮಯವನ್ನು ದಾಖಲಿಸುತ್ತಿದ್ದಾರೆ.
ನಗದು ಘೋಷಣೆ ನಿಯಮವೂ ಉಲ್ಲಂಘನೆ: ಸಾರಿಗೆ ಸಂಸ್ಥೆಯ ನಿಯಮಗಳ ಪ್ರಕಾರ, ನೌಕರರು ತಂದಿರುವ ನಗದು ಹಣದ ವಿವರಗಳನ್ನು ಅಧಿಕೃತ ಪುಸ್ತಕದಲ್ಲಿ (Cash Declaration) ಕಡ್ಡಾಯವಾಗಿ ದಾಖಲಿಸಬೇಕು. ಎಷ್ಟು ಹಣ ತರಲಾಗಿದೆ, ಯಾವಾಗ ತರಲಾಗಿದೆ ಮತ್ತು ಕಚೇರಿಯಿಂದ ಯಾವಾಗ ಹೊರಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಇರಬೇಕು. ಆದರೆ, ಈ ನಿಯಮವನ್ನು ಸಾರಾಸಗಟಾಗಿ ಗಾಳಿಗೆ ತೂರಲಾಗುತ್ತಿದ್ದು, ಇವರು ಕಚೇರಿ ಒಳಗೆ ಲೇಟಾಗಿ ಬಂದರೂ ಈ Cash Declaration ಪುಸ್ತಕದಲ್ಲಿ ಸರಿಯಾದ ಸಮಯಕ್ಕೆ ಬಂದಿದ್ದೇವೆ ಎಂದು ನಮೂದಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂದರೆ, ‘ಸಾರಿಗೆ ಮಿತ್ರ’ ಆಪ್ ಮೂಲಕ ಬೆಳಗ್ಗೆ 11ಗಂಟೆಗೆ ಕಚೇರಿಗೆ ಬಂದಿರುವ ಹಾಜರಾತಿ ದಾಖಲಾಗಿರುತ್ತದೆ. ಆದರೆ ಈ Cash Declaration ಪುಸ್ತಕದಲ್ಲಿ ಅವರು ನಾವು ಬೆಳಗ್ಗೆ 10.10ಕ್ಕೆ ಬಂದಿದ್ದೇವೆ ಎಂದು ಸಮಯ ನಮೂದಿಸಿ ಸಹಿ ಮಾಡುತ್ತಿದ್ದಾರೆ ಎಂಬ ಆರೋಪವಿದ್ದು, ‘ಸಾರಿಗೆ ಮಿತ್ರ’ ಆಪ್ ಹಾಗೂ Cash Declaration ಪುಸ್ತಕದಲ್ಲಿ ನಮೂದಾಗಿರುವ ಸಮಯವನ್ನು ಪರಿಶೀಲಿಸಿದರೆ ವಂಚಕರು ಸಿಕ್ಕಿಬೀಳುತ್ತಾರೆ ಎಂದು ತಿಳಿಸಿದ್ದಾರೆ.
ನಗದು ದುರುಪಯೋಗದ ಆತಂಕ: ನಗದು ಘೋಷಣೆ ಪುಸ್ತಕದಲ್ಲಿ ಸರಿಯಾದ ಮಾಹಿತಿ ದಾಖಲಿಸದೇ ಇರುವುದರಿಂದ ಆರ್ಥಿಕ ಅಪರಾಧಗಳು ಮತ್ತು ಸಂಸ್ಥೆಯ ನಗದು ದುರುಪಯೋಗಕ್ಕೆ ನೇರ ಹಾದಿ ಮಾಡಿಕೊಟ್ಟಂತಾಗುತ್ತದೆ. ನಿತ್ಯದ ಕಲೆಕ್ಷನ್ ಹಣ ಮತ್ತು ನೌಕರರ ಬಳಿ ಇರುವ ನಗದಿನ ನಡುವೆ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಗಳ ನಗದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೇಲ್ವಿಚಾರಕರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ: ಈ ಎಲ್ಲ ಅಕ್ರಮಗಳು ಬಹುತೇಕ ಕೆಎಸ್‌ಆರ್‌ಟಿಯ ಎಲ್ಲ ಕಚೇರಿಯ ಆವರಣಗಳಲ್ಲೇ ನಡೆಯುತ್ತಿದ್ದರೂ, ಸಂಸ್ಥೆಯ ಸಂಬಂಧಪಟ್ಟ ಡಿಪೋ ಮ್ಯಾನೇಜರ್‌ಗಳು ಅಥವಾ ಮೇಲ್ವಿಚಾರಕರು ಸೂಕ್ತ ನಿಗಾ ವಹಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ತಪಾಸಣೆಯ ಕೊರತೆಯೇ ಇಂತಹ ಅಕ್ರಮಗಳು ಮುಂದುವರಿಯಲು ಪ್ರಮುಖ ಕಾರಣವಾಗಿದೆ. ಇನ್ನಾರೂ ಮೇಲ್ವಿಚಾರಕರ ಮತ್ತು ಅಧಿಕಾರಿಗಳು ಈರೀತಿ ನಿರ್ಲಕ್ಷ್ಯ ತೋರದೆ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಮಾಣಿಕ ನೌಕರರ ಮೇಲೆ ನೈತಿಕ ಪರಿಣಾಮ: ಈ ರೀತಿ ಕೆಲವರು ಡ್ಯೂಟಿ ಮಾಡದೆಯೇ ವಾಮಮಾರ್ಗದಲ್ಲಿ ಹಾಜರಾತಿ ಮತ್ತು ಸಂಬಳ ಪಡೆಯುತ್ತಿದ್ದರೆ, ದಿನವಿಡೀ ಪ್ರಾಮಾಣಿಕವಾಗಿ ದುಡಿಯುವ ನೌಕರರಲ್ಲಿ ಅಸಮಾಧಾನ ಮೂಡುತ್ತದೆ. ಇದು ಇಡೀ ಸಂಸ್ಥೆಯ ಕೆಲಸದ ವಾತಾವರಣ ಮತ್ತು ನೌಕರರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಬೀಳಬೇಕಿದೆ.
ಸಂಸ್ಥೆಗೆ ನಷ್ಟ: ಕೆಲ ನೌಕರರ ಈ ನಡೆಯಿಂದ ಸಂಸ್ಥೆಯ ಘನತೆ ಸಾರ್ವಜನಿಕ ವಲಯದಲ್ಲಿ ಕುಸಿಯುತ್ತಿದೆ ಮತ್ತು ಸಂಸ್ಥೆಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಇನ್ನು ಕಠಿಣವಾದ ನಿಯಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯವಿದೆ.
ಮುಖ ಗುರುತಿಸುವಿಕೆ ಕಡ್ಡಾಯಗೊಳಿಸಿ: ಈ ವಂಚನೆಯನ್ನು ತಡೆಯಲು ‘ಸಾರಿಗೆ ಮಿತ್ರ’ ಆಪ್‌ನಲ್ಲಿ ಕಡ್ಡಾಯವಾಗಿ ಜಿಯೋ-ಫೆನ್ಸಿಂಗ್ (Geo-fencing) ಅಳವಡಿಸಬೇಕು. ಅಂದರೆ, ನೌಕರನು ನಿಗಮದ ಕಚೇರಿ ಅಥವಾ ಡಿಪೋ ಆವರಣದ ಒಳಗಿದ್ದಾಗ ಮಾತ್ರ ಆಪ್‌ನಲ್ಲಿ ಅಟೆಂಡೆನ್ಸ್ ಹಾಕಲು ಸಾಧ್ಯವಾಗುವಂತೆ ಮಾಡಬೇಕು ಇದು ಈಗಾಗಲೇ ಮಾಡಲಾಗಿದೆ. ಆದರೆ ಇದರ ಜತೆಗೆ ಮುಖ ಗುರುತಿಸುವಿಕೆ (Facial Recognition) ವ್ಯವಸ್ಥೆಯನ್ನು ಜಾರಿಗೆ ತರಬೇಕು.
ದಿಢೀರ್ ತಪಾಸಣೆ ಕ್ರಮವಾಗಬೇಕು: ಉನ್ನತ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಡಿಪೋ ಮತ್ತು ಕಚೇರಿಗಳಿಗೆ ದಿಢೀರ್ ಭೇಟಿ (Surprise Inspection) ನೀಡಿ ತಪಾಸಣೆ ನಡೆಸಬೇಕು. ಆಪ್‌ನಲ್ಲಿ ಹಾಜರಿ ಇದ್ದು, ಸ್ಥಳದಲ್ಲಿ ನೌಕರ ಇಲ್ಲದಿರುವುದು ಕಂಡುಬಂದಲ್ಲಿ ತಕ್ಷಣವೇ ಅಂತಹವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕು.
ಕಠಿಣ ಕಾನೂನು ಕ್ರಮ: ಸುಳ್ಳು ಹಾಜರಾತಿ ಹಾಕುವುದು ಮತ್ತು ಹಣಕಾಸಿನ ನಿಯಮ ಉಲ್ಲಂಘಿಸುವುದು ಅಪರಾಧ ಹಿನ್ನೆಲೆಯ ಕೃತ್ಯಗಳಾಗಿವೆ. ಇಂತಹ ನೌಕರರ ವಿರುದ್ಧ ಕೇವಲ ಎಚ್ಚರಿಕೆ ನೀಡದೆ, ವೇತನ ಕಡಿತ, ಸೇವೆಯಿಂದ ವಜಾ ಮತ್ತು ವಂಚನೆ ಪ್ರಕರಣದಡಿ ಕಾನೂನು ಕ್ರಮ ಜರುಗಿಸಿದರೆ ಮಾತ್ರ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಶಾಶ್ವತ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ.
ಇದೆಲ್ಲವನ್ನು ನೋಡಿದರೆ ಸಾರಿಗೆ ಸಂಸ್ಥೆಯ ಭಾರಿ ಅವ್ಯವಹಾರ ನಡೆಯುತ್ತಿರುವುದು ಎದ್ದುಕಾಳುತ್ತದೆ. ಇನ್ನಾದರೂ ನಿಷ್ಠಾವಂತ ಹಾಗೂ ಪ್ರಾಮಾಣಿಕ ಮೇಲಧಿಕಾರಿಗಳು ಈ ರೀತಿಯ ವಂಚಕರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಪ್ರಾಮಾಣಿಕ ನೌಕರರಿಗೆ ನ್ಯಾಯಕೊಡಬೇಕಿದೆ. ಜತೆಗೆ ಸಂಸ್ಥೆಯ ಗೌರವವನ್ನು ಕಾಪಾಡಬೇಕಿದೆ.







