KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮನವಿ
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಮ್ಮ ಭಾಗದಲ್ಲಿ ಇನ್ನಷ್ಟು ಬಲಪಡಿಸುವ ಹಾಗೂ ಗ್ರಾಮೀಣ ಭಾಗದ ಸಂಪರ್ಕ ಕ್ರಾಂತಿಗೆ ವೇಗ ನೀಡುವ ನಿಟ್ಟಿನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರೊಂದಿಗೆ ಶಾಂತಿನಗರದಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಸಿ ಚರ್ಚಿಸಲಾಯಿತು ಎಂದು ರಾಜಣ್ಣ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಧುಗಿರಿ ಘಟಕಕ್ಕೆ 50 ನೂತನ ಬಸ್ ಹಾಗೂ ಆರ್.ಟಿ.ಒ ಕಚೇರಿಗೆ ಹೆಚ್ಚುವರಿ ಅನುದಾನಕ್ಕೆ ಸಂಬಂಧಪಟ್ಟಂತೆ ಸಾರಿಗೆ ಸಚಿವ ಬೈರತಿ ಸುರೇಶ್, KSRTC ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಇಲಾಖೆ ಆಯುಕ್ತರ ಜತೆ ಮಧುಗಿರಿ ಶಾಕಸಕ ಕೆ.ಎನ್.ರಾಜಣ್ಣ ಸುದೀರ್ಘ ಸಮಾಲೋಚನೆ ನಡೆಸಿದರು.
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಮ್ಮ ಭಾಗದಲ್ಲಿ ಇನ್ನಷ್ಟು ಬಲಪಡಿಸುವ ಹಾಗೂ ಗ್ರಾಮೀಣ ಭಾಗದ ಸಂಪರ್ಕ ಕ್ರಾಂತಿಗೆ ವೇಗ ನೀಡುವ ನಿಟ್ಟಿನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರೊಂದಿಗೆ ಶಾಂತಿನಗರದಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಸಿ ಚರ್ಚಿಸಲಾಯಿತು ಎಂದು ರಾಜಣ್ಣ ತಿಳಿಸಿದ್ದಾರೆ.
ಇನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಇಲಾಖೆಯ ಆಯುಕ್ತರೊಂದಿಗೆ ನಡೆಸಿದ ಈ ಸುದೀರ್ಘ ಸಮಾಲೋಚನೆಯಲ್ಲಿ ಮಧುಗಿರಿ ಕ್ಷೇತ್ರಕ್ಕೆ ನೂತನ ಬಸ್‌ಗಳ ಸೇರ್ಪಡೆ ಹಾಗೂ ಆರ್.ಟಿ.ಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಧುಗಿರಿ ತಾಲೂಕಿನ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರದಲ್ಲೇ 50 ನೂತನ ಬಸ್‌ಗಳನ್ನು ರಸ್ತೆಗಿಳಿಸಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಈ ಹೊಸ ಬಸ್‌ಗಳು ಮಧುಗಿರಿ ವಲಯದ ಜನತೆಗೆ ಲಭ್ಯವಾಗಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ನಿತ್ಯ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.
ಆರ್.ಟಿ.ಒ ಕಚೇರಿಗೆ ಹೆಚ್ಚುವರಿ ಅನುದಾನ: ಪ್ರಾದೇಶಿಕ ಸಾರಿಗೆ ಕಚೇರಿಗಳ (RTO) ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ತಡೆರಹಿತ ಸೇವೆಗಳನ್ನು ಒದಗಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಕುರಿತು ಸಾರಿಗೆ ಇಲಾಖೆ ಆಯುಕ್ತರೊಂದಿಗೆ ಸವಿಸ್ತಾರವಾಗಿ ಚರ್ಚಿಸಿದರು. ಕಚೇರಿಯ ಮೂಲಸೌಕರ್ಯ ಮೇಲ್ದರ್ಜೆಗೆರಿಸುವುದು, ಡಿಜಿಟಲೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುವುದು ಹಾಗೂ ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿಯಿಲ್ಲದೆ ಆನ್‌ಲೈನ್ ಮೂಲಕ ಸುಲಭವಾಗಿ ಸೇವೆ ಪಡೆಯುವಂತೆ ಆರ್.ಟಿ.ಒ ವ್ಯವಸ್ಥೆಯನ್ನು ಸುಧಾರಿಸಲು ಅನುದಾನ ಬಿಡುಗಡೆ ಮಾಡುಬೇಕು ಎಂದು ಮನವಿ ಮಾಡಿದರು.
ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ತಮ್ಮ ಕ್ಷೇತ್ರದ ಸಾರಿಗೆ ಸಂಪರ್ಕದ ಸಮಸ್ಯೆಗಳು ಹಾಗೂ ಆರ್.ಟಿ.ಒ ಕಚೇರಿಯ ಅಗತ್ಯತೆಗಳ ಕುರಿತು ಸಚಿವರ ಗಮನ ಸೆಳೆದಿದ್ದರು. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಾರಿಗೆ ಸಚಿವರು ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಸಾರ್ವಜನಿಕಸ್ನೇಹಿ ಸೇವೆಗೆ ಸಚಿವರ ತಾಕೀತು: ಸರ್ಕಾರದ ಅನುದಾನಗಳು ಮತ್ತು ಹೊಸ ಬಸ್‌ಗಳ ಸೌಲಭ್ಯಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸೇವೆಗೆ ಧಕ್ಕೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲಾಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ನಿಗದಿತ ಸಮಯದೊಳಗೆ ಮಧುಗಿರಿಗೆ ಬಸ್ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.
ಈ ಸಭೆಯಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ ಅವರು ಉಪಸ್ಥಿತರಿದ್ದು, ಪ್ರಮುಖ ಸಲಹೆಗಳನ್ನು ಹಂಚಿಕೊಂಡರು. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಎರಡೂ ಸಂಸ್ಥೆಗಳ ಸಮನ್ವಯತೆ ಹಾಗೂ ಸಾರಿಗೆ ಇಲಾಖೆಯ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.







