NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ
"ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ವಿಶೇಷವಾಗಿ ಈ ಜನದಟ್ಟಣೆಯ ಅವಧಿಯಲ್ಲಿ ಈ ಹೊಸ ಬಸ್ ಸೇವೆಯನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಂಡು ಸರಿಯಾಗಿ ಕಾಲೇಜಿಗೆ ಹೋಗಿ ಬರಬೇಕು. ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು"

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ ನೀಡಲಾಗುತ್ತಿದ್ದು ಈ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಕರೆ ನೀಡಿದರು.
ಮಂಗಳವಾರ ಬೆಳಗಾವಿಯ ವಿದ್ಯಾರ್ಥಿಗಳು ಹಾಗೂ ಮಹಾವೀರ್ ಮಿರ್ಜಿ ಕಾಲೇಜಿನ ಆಡಳಿತ ಮಂಡಳಿಯ ಮನವಿಯನ್ನು ಪರಿಗಣಿಸಿ, ನೂತನ ಬಸ್ ಸೇವೆಗೆ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಾಲೇಜು ಸಮಯದ ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸಂಸ್ಥೆಯು ನೂತನ ಬಸ್ ಸೇವೆಯನ್ನು ನೀಡುತ್ತಿದೆ. “ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ವಿಶೇಷವಾಗಿ ಈ ಜನದಟ್ಟಣೆಯ ಅವಧಿಯಲ್ಲಿ ಈ ಹೊಸ ಬಸ್ ಸೇವೆಯನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಂಡು ಸರಿಯಾಗಿ ಕಾಲೇಜಿಗೆ ಹೋಗಿ ಬರಬೇಕು. ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು” ಎಂದು ಕರೆ ನೀಡಿದರು.
ಮುಂಜಾನೆ ಮತ್ತು ಸಾಯಂಕಾಲದ ಪೀಕ್ ಅವರ್‌ನಲ್ಲಿ (ಜನದಟ್ಟಣೆಯ ಸಂದರ್ಭದಲ್ಲಿ) ವಿದ್ಯಾರ್ಥಿಗಳು ಕಾಲೇಜು ತಲುಪಲು ಪಡುತ್ತಿದ್ದ ಪಡಬಾರದ ಪಾಡನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆಂದೇ ವಿಶೇಷವಾಗಿ ನಿಯೋಜನೆಗೊಂಡಿರುವ ಈ ಬಸ್ಸುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದ್ದು, ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ ನಾಂದಿ ಎಂದು ಬೆಳಗಾವಿ ಶಾಸಕ ಆಸಿಫ್ (ರಾಜು) ಶೇಠ ತಿಳಿಸಿದರು.
ಸಂಸ್ಥೆಯ ಚಾಲಕರು ಮತ್ತು ಸಿಬ್ಬಂದಿ ಸೇವೆಗೆ ಶ್ಲಾಘನೆ: ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಅತ್ಯಂತ ದಕ್ಷ ಹಾಗೂ ಅನುಭವಿ ಚಾಲಕರು ಮತ್ತು ನಿರ್ವಾಹಕರು ಇದ್ದಾರೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ಉತ್ತಮ ಸೇವೆ ನೀಡುತ್ತಿರುವ ಇವರ ಕಾರ್ಯವೈಖರಿ ಶ್ಲಾಘನೀಯ. ವೇತನ ಕಡಿಮೆ ಇರುವ ಈ ಇಂಥ ಕಠಿಣ ಪರಿಸ್ಥಿತಿಯಲ್ಲೂ ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕ ಸಾರಿಗೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ವೇತನ ತಾರತಮ್ಯ ನಿವಾರಣೆಗೆ ಸರ್ಕಾರದ ಗಮನ ಸೆಳೆಯುವೆ: ಇದೇ ವೇಳೆ ನೌಕರರ ವೇತನದ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಸದ್ಯ ಸಂಸ್ಥೆಯ ನೌಕರರಿಗೆ ಇರುವ ಕಡಿಮೆ ಸಂಬಳದ ಕುರಿತು ತಮಗೆ ಅರಿವಿದೆ ಎಂದ ಅವರು, “ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಕಡಿಮೆ ಸಂಬಳವಿರುವುದನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ನೌಕರರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳನ್ನು ಸರಿಯಾಗಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.







