ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್, ಬಸ್ಸಿನಲ್ಲಿ ನೇತಾಡಿದ ಮುಂಡ!
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿಯ ಶಿರ ದೇಹದಿಂದ ಬೇರ್ಪಟ್ಟಿದ್ದು, ರಸ್ತೆ ಬದಿಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು.

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಿಟಕಿಯಿಂದ ದೇಹ ಭಾಗಗಳನ್ನು ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ಇಂದು ನಡೆದಿರುವ ಭೀಕರ ಅಪಘಾತ ಒಂದು ಸಾಕ್ಷಿಯಾಗಿದೆ.
ವಿದ್ಯಾರ್ಥಿಯೊಬ್ಬ ಚಲಿಸುವ ಬಸ್‌ನ ಕಿಟಕಿಯಿಂದ ಹೊರಗೆ ತಲೆ ಹಾಕಿದ ಪರಿಣಾಮ ಹಿಂಬದಿಯಿಂದ ಬಂದ ಟಿಪ್ಪರ್ ತಲೆಗೆ ಡಿಕ್ಕಿ ಹೊಡೆದು ಆ ತಲೆಯ ರುಂಡವೇ ಕಟ್ ಆಗಿ ರಸ್ತೆ ಬದಿಗೆ ಬಿದ್ದಿರುವ ಅಘಾತಕಾರಿ ಘಟನೆ ಇಂದು ನಡೆದಿದೆ.
ರುಂಡ ರಸ್ತೆ ಬದಿಗೆ ಉರುಳಿಕೊಂಡು ಹೋಗಿ ಬಿದ್ದಿದ್ದು, ಮುಂಡ ಬಸ್‌ನ ಕಿಟಕಿಯಯಲ್ಲೇ ನೇತಾಡುತ್ತಿದೆ. ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದ್ದು, ಇಡೀ ಬಸ್ ಪ್ರಯಾಣಿಕರನ್ನೇ ಬೆಚ್ಚಿಬೀಳಿಸುತ್ತಿದೆ.
ಘಟನೆಯ ವಿವರ: ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕಿರೇಶ್ (17) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಇಂದು ಹುಬ್ಬಳ್ಳಿಯಿಂದ ತನ್ನ ಗ್ರಾಮವಾದ ಶಿರೂರಿಗೆ ತೆರಳಲು ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಹತ್ತಿದ್ದನು.
ಅಪಘಾತ ಹೇಗಾಯಿತು?: ಪಕ್ಕಿರೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ. ಈ ವೇಳೆ ಬಸ್ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿದ್ದಾಗ, ಗುಟ್ಕಾ ಉಗುಳುವುದಕ್ಕಾಗಿ ಆತ ಕಿಟಕಿಯ ಹೊರಗೆ ತಲೆ ಹಾಕಿದ್ದಾನೆ. ಆ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಕಿಟಕಿಯಿಂದ ಹೊರಗಿದ್ದ ಪಕ್ಕಿರೇಶ್ ಅವರ ತಲೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿಯ ಶಿರ ದೇಹದಿಂದ ಬೇರ್ಪಟ್ಟಿದ್ದು, ರಸ್ತೆ ಬದಿಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು. ಘಟನೆಯ ತೀವ್ರತೆಗೆ ಬಸ್ ಬಳಿ ನೆರೆದಿದ್ದ ಜನರು ದಿಕ್ಕೆಟ್ಟು ಹೋಗಿದ್ದಾರೆ.
ಪೊಲೀಸರ ಭೇಟಿ: ವಿಷಯ ತಿಳಿಯುತ್ತಿದ್ದಂತೆಯೇ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ:
ಪ್ರಯಾಣದ ವೇಳೆ ಕಿಟಕಿಯಿಂದ ಕೈ ಅಥವಾ ತಲೆಯನ್ನು ಹೊರಹಾಕುವುದು ಮೃತ್ಯುವನ್ನು ಆಹ್ವಾನಿಸಿದಂತೆ. ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಬಸ್ ಅಥವಾ ರೈಲುಗಳಲ್ಲಿ ಪ್ರಯಾಣಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.
ನೋಡಿ ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಶಿರೂರು ಗ್ರಾಮದ ಬಡ ಕುಟುಂಬದ ಈ ವಿದ್ಯಾರ್ಥಿಯ ಸಾವು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.







