ಬೆಂಗಳೂರು: ಕ್ಷಣಾರ್ಧದಲ್ಲಿ ಹೊತ್ತಿಉರಿದ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್: ಅದೃಷ್ಟವಶಾತ್ ಪ್ರಯಾಣಿಕರು ಪಾರು
ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು, ಕಂಡಕ್ಟರ್ ಹಾಗೂ ಚಾಲಕರು ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು: ಚಲಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ರಸ್ತೆ ಮಧ್ಯೆಯೇ ಹೊತ್ತಿ ಉರಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿಯಾಗದೆ ದೊಡ್ಡ ಅನಾಹುತವೊಂದು ತಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಜ್ಞಾನ ಭಾರತಿ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮೈಸೂರಿನಿಂದ ಬೆಂಗಳೂರಿನತ್ತ ಬರುತ್ತಿದ್ದ ಈ KSRTC ಬಸ್, ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಈ ವೇಳೆ ಬಸ್ ಇಂಜಿನ್ ಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ನಿಲ್ಲಿಸಿ ಎಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೂಡಲೇ ಕೆಳಗಿಳಿಸಿದ್ದಾರೆ. ಬಸ್ ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಸಿಲುಕಿ ಸುಟ್ಟು ಭಸ್ಮವಾಗಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು, ಕಂಡಕ್ಟರ್ ಹಾಗೂ ಚಾಲಕರು ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಬೆಂಕಿಯಿಂದಾಗಿ ಬಸ್ನ ಮುಂಭಾಗ ಹಾಗೂ ಒಳ ಭಾಗ ಸುಟ್ಟು ಕರಕಲಾಗಿದೆ. ಅಗ್ನಿ ಅವಘಡದಿಂದ ದಟ್ಟ ಹೊಗೆ ಆವರಿಸಿದ್ದು, ಕೆಲ ಕಾಲ ಸುತ್ತಮುತ್ತಾ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.







