ಬೆಂಗಳೂರು: ವಿಧಾನಸೌಧ ಕಾರಿಡಾರ್ ಸ್ವಚ್ಛತೆಗೆ 59 ಲಕ್ಷ ರೂ.ಗಳ ಟೆಂಡರ್‌ಅನ್ನು ಪಿಡಬ್ಲ್ಯುಡಿ ಇಲಾಖೆ ಕರೆದಿದೆ. ಆದರೆ ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ವಿಧಾನಸೌಧ ಸ್ವಚ್ಛತೆ ಕಾಪಾಡಲು ಈಗಾಗಲೇ ಡಿ ಗ್ರೂಪ್ ನೌಕರರು ಇದ್ದಾರೆ. ಆದರೂ ಪ್ರತಿದಿನ ನೀರಿನಿಂದ ಕಾರಿಡಾರ್ ಸ್ವಚ್ಛಗೊಳಿಸಲು 59 ಲಕ್ಷ ರೂ.ಗೆ ಟೆಂಡರ್ ಕರೆದಿರುವುದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಒಂದೆಡೆ ಸಾರಿಗೆ ನೌಕರರಿಗೆ ಅಕ್ಟೋಬರ್ ವೇತನವನ್ನು ನ.25ರ ನಂತರ ಬಿಡುಗಡೆ ಮಾಡಿದ್ದಾರೆ. ಅಂದರೆ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳಿಕೊಳ್ಳುವ ಸರ್ಕಾರಿ ಅಧಿಕಾರಿಗಳು ಇಂಥ ದುಂದುವೆಚ್ಚಕ್ಕೆ ಮುಂದಾಗಿರುವುದು ಏಕೆ ಎಂಬ ಅನುಮಾನ ಮೂಡುತ್ತಿವೆ.
ಸರ್ಕಾರಿ ಖಜಾನೆ ಖಾಲಿ ಆಗಿರುವ ಈ ಸಮಯದಲ್ಲಿ ಇಂಥ ವೆಚ್ಚ ಮಾಡಲು ಗುತ್ತಿಗೆ ನೀಡುವುದಕ್ಕೆ ಮುಂದಾಗಿರುವುದು ಏಕೆ? ಸಿಎಂ ಯಡಿಯೂರಪ್ಪ ಅವರು ಯಾರನ್ನು ಮೆಚ್ಚಿಸಲು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಏಕೆ ವಿಧಾನಸೌಧದಲ್ಲಿ ಡಿ ದರ್ಜೆ ನೌಕರರನ್ನು ಕೆಲಸದಿಂದ ಬಿಡಿಸಿದ್ದೀರಾ? ಇಲ್ಲ ಅವರು ಅರಾಮವಾಗಿ ಇರಲಿ ಎಂದು ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡಲು ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದೀರಾ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಇನ್ನು ವಿಧಾನಸೌಧದಲ್ಲಿ ಇರುವ ಎಲ್ಲಾ ಇಲಾಖೆಯಲ್ಲೂ ಆಯಾಯ ಕೊಠಡಿಗಳನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಇದ್ದಾರೆ. ಆದರೂ ಈ ರೀತಿ ದುಂದುವೆಚ್ಚ ಮಾಡಲು ಹೊರಟ್ಟಿದ್ದೀರಲ್ಲ ನಿಮಗೆ ಜನರ ಮೇಲೆ ಕಾಳಜಿ ಇದೆಯೇ ಎಂಬುದನ್ನು ನೀವು ಮೊದಲು ಪ್ರಶ್ನಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಇನ್ನು ವಿಧಾನಸೌಧ ಕಾರಿಡಾರ್ ಸ್ವಚ್ಛ ಮಾಡಲು ಡಿ ಗ್ರೂಪ್ ನೌಕರರು, ಗುತ್ತಿಗೆ ನೌಕರರ ಜತೆಗೆ ತೋಟಗಾರಿಕೆ ಇಲಾಖೆಯೂ ಸ್ವಚ್ಛತೆ ಮಾಡಲಿದೆ. ಇದಲ್ಲದರ ನಡುವೆಯೂ ಟೆಂಡರ್ ಕರೆಯುವ ಅಗತ್ಯವೇನಿತ್ತು ಎಂಬುವುದು ನಿಗೂಢವಾಗಿದೆ.