- ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಹೊಸ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಹಿಂದಿನ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಲು ಸರ್ಕಾರ ಬಯಸಿದೆ ಎಂದು ಕೇಂದ್ರ ತನ್ನ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕೈಟ್ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಕೋರಿ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಹೊಸತೇನೂ ಇಲ್ಲ. ನಾವು ಮಾತುಕತೆಗೆ ಯಾವಾಗಲೂ ಸಿದ್ಧರಿದ್ದೇವೆ. ಆದರೆ ಸರ್ಕಾರ ನಿರ್ದಿಷ್ಟ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ. ಅದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.
“ನಾವು ಸರ್ಕಾರದ ಪ್ರಸ್ತಾಪದ ಬಗ್ಗೆ ಈ ಮುಂಚೆ ಮಾತನಾಡಿಲ್ಲ. ಪ್ರಸ್ತುತ ನಾವು ಸರ್ಕಾರದ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಚರ್ಚಿಸುತ್ತಿದ್ದೇವೆ” ಎಂದು ಟಿಕೈಟ್ ತಿಳಿಸಿದ್ದಾರೆ.
ರೈತರೊಂದಿಗೆ ಡಿಸೆಂಬರ್ 9ರಂದು ನಿಗದಿಯಾಗಿದ್ದ 6ನೇ ಸುತ್ತಿನ ಮಾತುಕತೆ ರದ್ದಾಗಿತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಆಹ್ವಾನಿಸಿ 40 ರೈತ ಮುಖಂಡರಿಗೆ ಪತ್ರ ಬರೆದಿದೆ.
ರೈತ ಮುಖಂಡರಿಗೆ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಪತ್ರ ಬರೆದಿದ್ದು, ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾಪದ ಬಗ್ಗೆ ತಮ್ಮ ಕಾಳಜಿ ನಿರ್ದಿಷ್ಟಪಡಿಸುವಂತೆ ಮತ್ತು ಮುಂದಿನ ಸುತ್ತಿನ ಮಾತುಕತೆಗೆ ಅನುಕೂಲಕರ ದಿನಾಂಕವನ್ನು ನಿಗದಿಪಡಿಸುವಂತೆ ಕೇಳಿಕೊಂಡಿದ್ದಾರೆ.
ಈ ಪತ್ರದಲ್ಲಿ ಹೊಸದೇನೂ ಇಲ್ಲ. ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ಪತ್ರದಲ್ಲಿ ಸರ್ಕಾರ ತನ್ನ ಪ್ರಸ್ತಾವನೆಯನ್ನು ಚರ್ಚಿಸಲು ಮತ್ತೊಂದು ಸುತ್ತಿನ ಮಾತುಕತೆಗೆ ದಿನಾಂಕ ತಿಳಿಸುವಂತೆ ಕೇಳಿದೆ ಎಂದು ಮತ್ತೊಬ್ಬ ರೈತ ಮುಖಂಡ ಅಭಿಮನ್ಯು ಕೊಹಾರ್ ತಿಳಿಸಿದರು.
ನಮ್ಮ ಬೇಡಿಕೆ ಏನು ಅಂತ ಅವರಿಗೆ ಗೊತ್ತಿಲ್ಲವೇ? ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ಕೊಹಾರ್ ತಿಳಿಸಿದ್ದಾರೆ.
ಈ ನಡುವೆ ದಿನಾಕ ನಿಗದಿಗೆ ಸರ್ಕಾರ ಕೋರಿರುವುದರಿಂದ ರೈತ ಮುಖಂಡರು ವಿಸ್ತೃತ ಚರ್ಚೆ ಮೂಲಕ ನಿಗದಿ ಪಡಿಸಲು ಮತ್ತು ಆ ಸಭೆಯಲ್ಲಿ ಯಾವ ಬೇಡಿಕೆಯನ್ನು ಸರ್ಕಾರ ಈಡೇರಿಸಲೇ ಬೇಕು ಎಂಬುದರ ಬಗ್ಗೆ ಗಟ್ಟಿ ನಿಲುವು ತಳೆಯುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.