- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದಕ್ಷಿಣ ಇಂಗ್ಲೆಂಡ್ನಲ್ಲಿ ಕಂಡು ಬರುತ್ತಿರುವ ಹೊಸ ಸ್ವರೂಪದ ಕೊರೊನಾ ವೈರಸ್ನ್ನು ತಡೆಯುವ ಉದ್ದೇಶದಿಂದ ಈಗಾಗಲೇ ಭಾರತ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳು ಇಂಗ್ಲೆಡ್ ವಿಮಾನಯಾನವನ್ನು ರದ್ದು ಪಡಿಸಿವೆ.
ಇನ್ನು ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಕೆ ಸುಧಾಕರ್, ಕೊರೊನಾ ವೈರಸ್ ಮತ್ತೊಮ್ಮೆ ಜಗತ್ತಿನಲ್ಲಿ ಈ ಮೂಲಕ ಆತಂಕ ಮೂಡಿಸಿದೆ. ಈ ಹಿನ್ನೆಲೆ ಇಂಗ್ಲೆಂಡ್ನಿಂದ ಬಂದವರು ಒಂದು ವಾರ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಅಲ್ಲದೇ ಬ್ರಿಟನ್ನಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆ ಮೊನ್ನೆ ಬ್ರಿಟನ್ನಿಂದ ಬಂದವರ ಮಾಹಿತಿ ಲಭ್ಯವಾಗಿದೆ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ವಿಶೇಷ ಕಿಯೋಸ್ಕ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಯುಕೆ ಸೇರಿದಂತೆ ಬೇರೆ ದೇಶಗಳಿಗೆ ಹೋಗಿ ಭಾರತಕ್ಕೆ ಮರಳುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು ಎಂದು ಹೇಳಿದ್ದಾರೆ.
ಇಂಗ್ಲೆಂಡ್, ನೆದರ್ಲೆಂಡ್‌ನಿಂದ ಬರುವವರಿಗೆ ನಿಷೇಧ ಮಾಡಲಾಗಿದೆ. ಬೇರೆ ದೇಶಗಳ ಬಗ್ಗೆ ಇನ್ನೂ ಕಟ್ಟು ನಿಟ್ಟಿಲ್ಲ. ಬ್ರಿಟಿಷ್ ಏರ್ ವೇಸ್‌ನ 49 ಪ್ರಯಾಣಿಕರು ಟೆಸ್ಟ್ ಮಾಡಿಸಿಲ್ಲ. ನಿನ್ನೆ ಇಂದು ಒಟ್ಟು138 ಜನ ಬೆಂಗಳೂರಿಗೆ ಬಂದಿದ್ದಾರೆ. ಇವರೆಲ್ಲರನ್ನೂ ಟ್ರೇಸ್ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇಂಗ್ಲೆಂಡ್ ನಿಂದ ಬಂದವರಿಗೆ ಮಾತ್ರ ಒಂದು ವಾರ ಹೋಮ್ ಕ್ವಾರಂಟೈನ್ ನಲ್ಲಿರಬೇಕು. 14ದಿನಗಳಲ್ಲಿ ಯೂರೋಪ್ನಿಂದ ರಾಜ್ಯಕ್ಕೆ ಬಂದವರಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುತ್ತೇವೆ. ಇನ್ನು ಈ ಹೊಸ ಸ್ವರೂಪದ ಕೊರೊನಾ ಬಗ್ಗೆ ಯಾರೂ ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ ಎಚ್ಚರಿಕೆ ಕೈಗೊಳ್ಳುವುದು ಮುಖ್ಯ. ಕ್ರಿಸ್ ಮಸ್ ಆಚರಣೆ, ಹೊಸ ವರ್ಷ ಆಚರಣೆ ಬಗ್ಗೆ ಎಚ್ಚರಿಕೆ ಇರಲಿ ಎಂದು ತಿಳಿಸಿದರು.
ಡಿ. 31ವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧ
ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ಈ ವೈರಸ್ ಶೇ. 70ರಷ್ಟು ವೇಗವಾಗಿ ಹರಡುತ್ತಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಬ್ರಿಟನ್ನಲ್ಲಿ ಈ ಸೋಂಕು ನಿಯಂತ್ರಣ ಮೀರಿದೆ. ಈ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಮತ್ತು ಬ್ರಿಟನ್ ನಡುವೆ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ.
ಡಿ. 22ರ ಮಧ್ಯರಾತ್ರಿಯಿಂದ ಡಿ. 31ವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಈ ಕುರಿತು ತಿಳಿಸಿರುವ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್, ಹೊಸ ಸ್ವರೂಪದ ವೈರಸ್ ಆರ್ ಅನ್ನು 0.4 ಅಥವಾ ಅದಕ್ಕಿಂತ ಹೆಚ್ಚಿದೆ. ಇದು ಅನಿಶ್ಚಿತತೆ ಹೊಂದಿದ್ದರೂ ಹಳೆಯ ವೈರಸ್ಕ್ಕಿಂತ ಶೇ. 70ರಷ್ಟು ವೇಗವಾಗಿ ಹರಡುತ್ತದೆ.
ಬ್ರಿಟನ್ನಲ್ಲಿ ವೇಗವಾಗಿ ಹರಡುತ್ತಿರುವ ಈ ಸೋಂಕು ಹೆಚ್ಚು ಮಾರಕ ಅಥವಾ ಹೆಚ್ಚಿನ ಕಾಯಿಲೆಗೆ ಕಾರಣವಾಗುತ್ತದೆ ಎಂಬ ಬಗ್ಗೆ ನಿರ್ಧರಿಸಲು ಇನ್ನು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಇದು ಹೆಚ್ಚು ಸಾಂಕ್ರಾಮಿಕವಾಗಿರುವ ಹಿನ್ನೆಲೆ ಶೀಘ್ರವಾಗಿ ಹರಡುತ್ತಿದೆ ಎಂದು ಇಂಪಿರಿಯಲ್ ಕಾಲೇಜ್ ಲಂಡನ್ನ ಡಾ. ಎರಿಕ್ ವೋಲ್ಜ್ ತಿಳಿಸಿದ್ದಾರೆ.
ಇನ್ನು ಐರ್ಲೆಂಡ್ ಹೊರತು ಪಡಿಸಿ ಯುನೈಟೆಡ್ ಕಿಂಗ್ಡಮ್ನ ಹಲವು ಪ್ರದೇಶದಲ್ಲಿ ಈ ಸೋಂಕು ಕಂಡು ಬಂದಿದೆ. ಅದರಲ್ಲಿಯೂ ಲಂಡನ್, ಆಗ್ನೇಯ, ಪೂರ್ವ ಇಂಗ್ಲೆಂಡ್ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಈಗಾಗಲೇ ಕೊರೋನಾ ವೈರಸ್ನ ವಿಭಿನ್ನ ಸ್ವರೂಪಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಹಲವು ವೈರಸ್ ಶೀಘ್ರವಾಗಿ ಹರಡುವುತ್ತವೆ ಎಂದು ತಿಳಿಸಿದ್ದಾರೆ.
ಈ ಸೋಂಕಿನ ಕುರಿತು ಈಗಾಗಲೇ ಬ್ರಿಟನ್ ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಸಿದ್ದು, ಲಂಡನ್ನಲ್ಲಿ ಶೇ. 60 ರಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ. ಭಾನುವಾರ ಒಂದೇ ದಿನದಲ್ಲಿ 1,100 ಪ್ರಕರಣಗಳು ಈ ಹೊಸ ಸ್ವರೂಪದ ಕೊರೊನಾ ವೈರಸ್ನಿಂದ ದಾಖಲಾಗಿದೆ.