- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಹೊಸ ಕೊರೊನಾ ಸೋಂಕು ಹಬ್ಬಲು ಬಿಡುವುದಿಲ್ಲ. ಆದರೆ ಮಹಾರಾಷ್ಟ್ರ ಮಾದರಿಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾದ ಹೊಸ ಮಾದರಿ ವೈರಸ್ ನಿಂದಾಗ ರಾಜ್ಯ, ದೇಶದಲ್ಲಿ ಆತಂಕ ಎದುರಾಗಿದ್ದು, ವಿದೇಶಗಳಿಂದ ಬರುವವರ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ದೇಶಾದ್ಯಂತ ಈಗಾಗಲೇ ಹೈ ಅಲರ್ಟ್ ಇದೆ. ಪ್ರಧಾನಿ ಕೂಡಾ ಆತಂಕಕ್ಕೊಳಗಾಗಿ ಎಚ್ಚರಿಕೆಯಿಂದ ಇರುವಂತೆ ಎಲ್ಲಾ ರಾಜ್ಯಗಳಿಗೂ, ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ವೈರಸ್ ಹರಡದಂತೆ ಎಚ್ಚರಿಕೆ ವಹಿಸುತ್ತೇವೆ. ಈ ಬಾರಿ ಹೊಸ ವರ್ಷ ಆಚರಣೆಯೇ ಇಲ್ಲ ಹೊಸ ವರ್ಷ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಬಿಡಲ್ಲ ಎಂದು ತಿಳಿಸಿದರು.
ಕೊರೊನಾ ರೂಪಾಂತರ ಇಡೀ ರಾಜ್ಯ ಮತ್ತು ದೇಶದ ಜನರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ ಹಾಗಾಗಿ ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ. ಯಾರೇ ಹೊರಗಡೆಯಿಂದ ಬಂದರೂ ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ಚಿಂತನೆ
ಈ ನಡುವೆ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಕೊರೊನಾ ಹೊಸ ಮಾದರಿಯ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರಕ್ಕೆ ಜನರ ಆರೋಗ್ಯವೇ ಮುಖ್ಯ. ಅವರ ರಕ್ಷಣೆಗಾಗಿ ನೈಟ್ ಕರ್ಫ್ಯೂ ಜಾರಿಗೆ ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೇಂದ್ರ ಆರೋಗ್ಯ ಸಚಿವಾಲಯ ನೈಟ್ ಕರ್ಫ್ಯೂ ವಿಧಿಸುವ ಅಧಿಕಾರ ರಾಜ್ಯಗಳಿಗೆ ನೀಡಿದೆ ಎಂದು ತಿಳಿಸಿದ್ದಾರೆ.