ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಅವರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಅವರ ಮಗನೂ ಸ್ಪರ್ಧೆ ಮಾಡುತ್ತಾರೆ. ಅಪ್ಪ-ಮಗ ಇಬ್ಬರೂ ಜೆಡಿಎಸ್ ಪಕ್ಷದಿಂದಲೇ ಚುನಾವಣೆಗೆ ನಿಲ್ಲುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಶಾಸಕ ಸಾ.ರಾ.ಮಹೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಟಿಡಿ, ಅವರ ಮಗ ಎಲ್ಲೆಲ್ಲಿ ನಿಲ್ಲಬೇಕು ಅಂತ ನಿರ್ಧಾರ ಆಗಿದೆ. ಅವರಿಗೆ ಹುಣಸೂರು ಕ್ಷೇತ್ರ ಇಷ್ಟ ಅಲ್ಲಿಯೇ ನಿಲ್ಲುತ್ತಾರೆ. ಅವರಿಗೆ ಬೇಕು ಅಂದ್ರೆ ಚಾಮರಾಜ ಕ್ಷೇತ್ರದಲ್ಲೂ ನಿಲ್ಲಬಹುದು. ನಮಗೆ ಎರಡು ಕ್ಷೇತ್ರ ಬಿಟ್ಟು ಉಳಿದೆಲ್ಲ ಕಡೆ ಅಭ್ಯರ್ಥಿ ರೆಡಿ ಇದ್ದಾರೆ. ಎಲ್ಲರೂ ಅವರ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.
ಹೀಗಾಗಿ ನಾನು ಹೇಳುತ್ತಿದ್ದೇನೆ ಅವರು ಜೆಡಿಎಸ್ ನಲ್ಲೇ ಇದ್ದಾರೆ ಮುಂದೆಯೂ ಇರುತ್ತಾರೆ. ಇನ್ನು ಚುನಾವಣೆಗೂ ಮುನ್ನ ಭಿನ್ನಾಭಿಪ್ರಾಯ ಬರೋದು ಸಹಜ. ಆದರೆ, ಚುನಾವಣೆ ಬಂದ ತಕ್ಷಣ ನಾವೆಲ್ಲ ಒಂದಾಗುತ್ತೇವೆ. ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನು ಒಳಗಡೆ ಇಟ್ಟುಕೊಳ್ಳಲ್ಲ. ಹೊರಗಡೆ ಮಾತನಾಡಿ ಎಲ್ಲ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ಇರೋದೆ ಆ ಥರ ಎಂದು ಹೇಳಿದರು.
ಜಿ.ಟಿ.ದೇವೇಗೌಡರನ್ನು ಉಚ್ಛಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿಟಿಡಿ ಸಿಎಂ ಅವರನ್ನು ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನು ನಾವ್ಯಾಕೆ ಉಚ್ಛಾಟಿಸುತ್ತೇವೆ. ಅಂಥ ಕೆಲಸವನ್ನು ಏನು ಮಾಡಿದ್ದಾರೆ ಅವರು? ಆದ್ರೆ ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನು ಉಚ್ಛಾಟಿಸಬೇಕಲ್ಲವೇ?. ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಅಂತ ಅವರ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದರು.
ನನ್ನನ್ನು ಮೈಸೂರು ಹೈಕಮಾಂಡ್ ಅಂತ ಯಾರು ಹೇಳಿದ್ರು? ಓಹ್ ಜಿಟಿಡಿ ಹೇಳಿದ್ರಾ? ಹಾಗಾದ್ರೆ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಬಿಡಿ ಎಂದು ಹೇಳುವ ಮೂಲಕ ಜಿಟಿಡಿಗೆ ನಯವಾಗಿಯೇ ತಿರುಗೇಟನ್ನು ಕೊಟ್ಟರು.
ಜಿಟಿಡಿ ಅವರು ಒಂದಿಷ್ಟು ಆರೋಪ ಮಾಡಿದ್ದಾರೆ. ಆದರೆ ನಮ್ಮ ಎಲ್ಲ ನಾಯಕರ ಜತೆ ಅವರು ಚೆನ್ನಾಗಿದ್ದಾರೆ. ಮೊನ್ನೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದಾಗ ಜಿಟಿಡಿಯವರೇ ಮೊದಲು ಫೋನ್ ಮಾಡಿದ್ರು. ಜಿಟಿಡಿ ಹುಟ್ಟುಹಬ್ಬದ ದಿನ ಅನಿತಕ್ಕನವರೇ ಜಿಟಿಡಿಗೆ ಫೋನ್ ಮಾಡಿದ್ರು. ನಮ್ಮ ಯುವ ನಾಯಕ ನಿಖಿಲ್ ಅವರ ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಹಾಗಾಗಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಈ ಬಗ್ಗೆ ನಾನು ಅವರ ಜತೆ ಜಲದರ್ಶಿನಿಯಲ್ಲಿ ಮಾತನಾಡಿದ್ದೆ. ಎಲ್ಲವನ್ನು ಸರಿಪಡಿಸಿಕೋಳ್ಳುತ್ತೇವೆ ಎಂದರು.
ಇನ್ನು ನನ್ನ ಕೊನೆ ಉಸಿರು ಇರೋವರೆಗೂ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗೋದಿಲ್ಲ. ಕೆ.ಆರ್.ನಗರ ಬಿಟ್ಟು ಬೇರೆಲ್ಲೂ ನಾನು ಸ್ಪರ್ಧೆ ಮಾಡಲ್ಲ. ನಾನು ಎಲ್ಲಿ ರಾಜಕೀಯ ಆರಂಭಿಸಿದ್ದೇನೋ ಅಲ್ಲೇ ರಾಜಕೀಯ ನಿವೃತ್ತಿ ಆಗುತ್ತೇನೆ. ಅದು ಬಿಟ್ಟು ಬೇರೆ ಯಾವ ಕ್ಷೇತ್ರಕ್ಕೂ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.