ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಮನುಷ್ಯನಲ್ಲಿ ಮಾನವತವಾದ ಬೆಳೆದರೆ ಮಾತ್ರ ಸಮಾನತವಾದ ಬೆಳೆಯಲು ಸಾಧ್ಯ ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಕೆಂಪರಾಜು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದವತಿಯಿಂದ ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
1910 ರಲ್ಲಿ ಕಾರ್ಮಿಕ ಚಳುವಳಿಯ ರೂಪದಲ್ಲಿ ಪ್ರಾರಂಭವಾದ ಹೋರಾಟವು ಮಹಿಳಾ ಹೋರಾಟವಾಗಿ ಮಾರ್ಪಟ್ಟಿತ್ತು ಇದನ್ನು ಮನಗಂಡ ವಿಶ್ವಸಂಸ್ಥೆಯು ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಗಂಡಾಗಲಿ ಹೆಣ್ಣಾಗಲಿ ಅವರಿಗೂ ಬದುಕುವ ಸಮಾನ ಅವಕಾಶ ಕಲ್ಪಿಸುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಪ್ರಾರಂಭಿಸಲಾಯಿತು ಎಂದರು.
ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ತರವಾದದ್ದು, ತಾನು ಸಮಾಜದಲ್ಲಿ ಬೆಳೆದು ದೊಡ್ಡವರಾಗಲು ತಾಯಿಯಾದವಳು ಅತ್ಯಂತ ಜಾಗರುಕತೆಯಿಂದ ಸಾಕಿಸಲಹುತ್ತಾಳೆ ಆದ್ದರಿಂದ ಮಕ್ಕಳು ತಾಯಿಯ, ಸಹೋದರಿಯ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು, ಆದರೆ ಹೆಣ್ಣು ಎಂಬ ಕಾರಣಕ್ಕೆ ವರದಕ್ಷಣೆ ಕಿರುಕುಳ, ಅತ್ಯಚಾರ, ಭ್ರೂಣಹತ್ಯೆ ಇನ್ನಿತರ ಹೆಸರಿನಲ್ಲಿ ಮಹಿಳಾ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಹೆಚ್ಚುವರಿ ನ್ಯಾಯಾಧೀಶೆ ಬಿ.ಡಿ.ರೋಹಿಣಿ ಮಾತನಾಡಿ, ಪೋಷಕರು ಬಹುಬೇಗನೆ ತಮ್ಮ ಹೆಣ್ಣು ಮಕ್ಕಳ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕೆಂಬ ಕಾರಣದಿಂದ ಇಂದು ಬಾಲ್ಯವಿವಾಹ ಮಾಡುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ ಎಂದರು.
ತಂದೆ ತಾಯಿಗಳು ಮತ್ತು ಪೋಷಕರು ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಬೆಂಕಿಯ ಕೆಂಡದಂತೆ ಎಂದು ಭಾವಿಸಿ ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡಿ ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುವುದನ್ನೆ ಕಾಯುತ್ತಿರುತ್ತಾರೆ. ಇದರ ಪರಿಣಾಮು ಇಂದು ಬಾಲ್ಯ ವಿವಾಹ, ವರಧಕ್ಷಿಣೆ ಕಿರುಕುಳ, ಭ್ರೂಣಹತ್ಯೆ ಇನ್ನು ಮುಂತಾದ ಸಮಾಜದ ಅನಿಷ್ಠ ಪದ್ದತಿಗಳಿಗೆ ದಾರಿ ಮಾಡಿ ಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕ ವಯಸ್ಸಿನಲ್ಲಿಯೆ ವಿವಾಹವಾದ ಪುರುಷ ವರದಕ್ಷಿಣೆಯ ದಾಹಕ್ಕೆ ಹೆಣ್ಣಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಪ್ರಾರಂಭವಾಗಿ ಮಹಿಳೆಯರು ಸಾವಿಗೀಡಾಗುತ್ತಿರುವುದು ವಿಷಾದನೀಯವಾಗಿದೆ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶೆ ಮೋಹನಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣವೆಂಬುದು ಅತ್ಯಮೂಲ್ಯ ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಮುಂದಾಗಬೇಕಿದೆ ಎಂದರು.
ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಕಳನ್ನು ನೋಡುವ ವಿಧಾನ ಬದಲಾಗಬೇಕಿದ್ದು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ಜೀವನ ಪರ್ಯಂತ ಸೇವೆಯನ್ನು ಮಾಡುವ ಮನೋಭಾವವನ್ನು ಹೊಂದಿರುವ ಹೆಣ್ಣನ್ನು ಗೌರವಿಸಬೇಕಿದೆ ಎಂದರು.
ಎಲ್ಲಿ ನಾರಿಯರನು ಗೌರವಿಸುತ್ತಾರೋ ಅಲ್ಲಿ ದೇವರುಗಳು ನೆಲೆಸುತ್ತಾರೆ ಎಂಬ ಹಿರಿಯರ ನಾಣ್ಣುಡಿಯಂತೆ ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿದರು. ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ಸಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಅಶೋಕ್, ಪ್ಯಾನಲ್ ವಕೀಲ ಎಸ್.ಎಸ್.ಮಹೇಂದ್ರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.