ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇದು ಶೇ. ನೂರರಷ್ಟು ನಕಲಿ ಸಿಡಿ. ನಾನು ಅಪರಾಧಿಯಲ್ಲ, ನಿರಪರಾಧಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಗದ್ಗದಿತರಾಗಿದ್ದರು.
ರಮೇಶ್ ಜಾರಕಿಹೊಳಿ ವಿರುದ್ಧ ಬಿಡುಗಡೆಯಾಗಿರುವ ರಾಸಲೀಲೆ ಸಿಡಿ ಬಗ್ಗೆ ಸ್ಪಷ್ಟನೆ ನೀಡಲು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಈ ವೇಳೆ ಭಾವುಕರಾದರು. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಷಡ್ಯಂತರದಿಂದ ನನಗೆ ಹೀಗೆ ಮಾಡಿದ್ದಾರೆ ಎಂದು ಹೇಳಿದರು.
ಇನ್ನು ಈ ಷಡ್ಯಂತರದ ಹಿಂದೆ ಒಬ್ಬ ಮಹಾನ್ ನಾಯಕನ ಕೈವಾಡವಿದೆ ಎಂದು ಆರೋಪ ಮಾಡಿದರು. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ದಯವಿಟ್ಟು ನನಗೆ ಬೆಂಬಲ ನೀಡಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದರು.
ಇಂಥ ಒಂದು ಸಿಡಿಗೆ ಹೆಚ್ಚೆಂದರೆ 20 ಕೋಟಿ ರೂ. ಖರ್ಚು ಮಾಡಬಹುದೇನೊ. ಆದರೆ, ಈ ಸಿಡಿಗೆ ನೂರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಅದಕ್ಕೆ ಯಶವಂತಪುರ ಮತ್ತು ಹುಳಿಮಾವು ಎರಡು ಕಡೆ ಷಡ್ಯಂತರ ರೂಪಿಸಿದ್ದರು ಎಂದು ದೂರಿದ ಅವರು, ಇನ್ನು ಆ ಸಿಡಿಯಲ್ಲಿರುವ ಯುವತಿಗೆ ಕೊಟ್ಟಿರುವುದು 50 ಲಕ್ಷ ರೂ. ಅಲ್ಲ 5 ಕೋಟಿ ರೂ. ಜತೆಗೆ ವಿದೇಶದಲ್ಲಿ ಎರಡು ಪ್ಲ್ಯಾಟ್ ಕೊಡಿಸುವ ಮಾಹಿತಿ ಇದೆ ಎಂದರು.
ಈ ಸಿಡಿ ಬಗ್ಗೆ ಒರಾಯನ್ ಮಾಲ್ ಬಳಿಯ 4, 5ನೇ ಮಹಡಿಯ ಪ್ಲಾಟ್ನಲ್ಲಿ ನಾಲ್ಕು ತಿಂಗಳಿಂದಲೂ ಷಡ್ಯಂತ್ರ ನಡೆದಿದೆ. ರಾಜಕೀಯ ಏಳಿಗೆ ಸಹಿಸದೆ ಈ ತಂತ್ರ ಮಾಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿರುವವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಾನು ಬಿಡಲ್ಲ. ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದರು.
ನನಗೆ ಕುಟುಂಬದ ಗೌರವ ಮುಖ್ಯ ರಾಜಕಾರಣಿಯಾಗಲು ಆಸಕ್ತಿಯಿಲ್ಲ. ರಾಜಮನೆತನ ನನ್ನದು. ನನ್ನ ಕುಟುಂಬದ ಗೌರವ ವಾಪಸ್ ಬರಬೇಕು. ರಾಜಕಾರಣಕ್ಕೆ ಮತ್ತೆ ಬರುತ್ತೇನೋ ಬಿಡುತ್ತೇನೋ ಗೊತ್ತಿಲ್ಲ. ಆದರೆ ಈ ರೀತಿ ಮಾಡಿದವರನ್ನು ಜೈಲಿಗೆ ಹಾಕಿಸದೆ ಬಿಡೋಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಹಾನ್ ನಾಯಕನ ಮೇಲೆ ಅನುಮಾನ
ಒಬ್ಬ ರಾಜಕೀಯ ನಾಯಕನ ಮೇಲೆ ರಮೇಶ್ ಜಾರಕಿಹೊಳಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಮೂರು ತಿಂಗಳು ಇಲಾಖೆ ಕಾರ್ಯ ನಿರ್ವಹಿಸಲು ನಿನ್ನಿಂದ ಆಗಲ್ಲ ಎಂದು ಹೇಳಿದ್ದ. ಹೀಗಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ಸುಮ್ಮನಿದ್ದೆ ಎಂದರು.
ಸಿಡಿ ಬಿಡುಗಡೆ ಬಗ್ಗೆಈ ಮೊದಲೇ ನನ್ನ ಹಿತೈಷಿಗಳಿಂದ ಮಾಹಿತಿ ಸಿಕ್ಕಿತ್ತು ಧೈರ್ಯದಿಂದಿರು ಎಂದು ಕೇಂದ್ರ ಮತ್ತು ರಾಜ್ಯ ನಾಯಕರೂ ಹೇಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಧೈರ್ಯ ತುಂಬಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಜಾರಕಿಹೊಳಿ ಅವರು ಮಹಿಳೆಯನ್ನು ಕೆಲಸದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಮತ್ತೆ ಇತ್ತೀಚೆಗೆ ವಾಪಸ್ ಪಡೆದಿದ್ದಾರೆ. ಆ ಬಳಿಕ ಇಂದು ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು.