ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾರ್ಚ್ 16ರಿಂದ ಬಹುತೇಕ ಸಾರಿಗೆ ನೌಕರರು ಮುಷ್ಕರ ನಡೆಸುವುದು ಖಚಿತವಾಗಿತ್ತು. ಕಾರಣ ಬಜೆಟ್ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಯಾವುದೇ ಮಹತ್ವ ಸಿಗದಿರುವುದು. ಆದರೆ, ಮಾರ್ಚ್ 16ರಂದು ಸರ್ಕಾರಕ್ಕೆ ಮತ್ತೆ ಈ ಬಗ್ಗೆ ಎಚ್ಚರಿಕೆ ನೀಡಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮುಷ್ಕರ ಮಾಡುವ ದಿನಾಂಕವನ್ನು ಘೊಷದಣೆ ಮಾಡಲಾಗುವುದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಮಂಡಿಸಿದ ಬಜೆಟ್ 2021ರಲ್ಲಿ ನೌಕರರು ಇಟ್ಟಿದ್ದ ಯಾವುದೇ ಬೇಡಿಕೆ ಬಗ್ಗೆಯೂ ಪ್ರಸ್ತಾಪವಾಗಿಲ್ಲ. ಕಳೆದ ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸಾರಿಗೆ ನೌಕರರು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗಳನ್ನು ಇಟ್ಟಿದ್ದರು.
ಈ ವೇಳೆ ರಾಜ್ಯ ಸರ್ಕಾರ ಸರ್ಕಾರಿ ನೌಕರನಾಗಿ ಮಾಡುವ ಬೇಡಿಕೆ ಬಿಟ್ಟು ಉಳಿದ ಒಂಬತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಜೊತೆಗೆ 6ನೇ ವೇತನ ಆಯೋಗ ಜಾರಿ ಭರವಸೆ ನೀಡಲಾಗಿತ್ತು. ಆದರೆ ಬಜೆಟ್ನಲ್ಲಿ ಇದ್ಯಾವ ಬೇಡಿಕೆ ಬಗ್ಗೆಯೂ ಪ್ರಸ್ತಾಪ ಆಗಿಲ್ಲ. ಹಾಗಾಗಿ ಮುಷ್ಕರದ ಬಗ್ಗೆ ಇಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಸಾರಿಗೆ ಮುಖಂಡರು ಭಾಗಿಯಾಗಿ ಮುಂದಿನ ಹೋರಾಟ ಯಾವ ರೀತಿ ರೂಪಿಸಬೇಕು ಮುಷ್ಕರ ನಡೆಸಬೇಕೋ ಬೇಡವೋ ಈ ಎಲ್ಲಾ ಅಂಶಗಳ ಬಗ್ಗೆ ನಡೆದ ಸಭೆಯಲ್ಲಿ ಮಾ.16ರಂದು ಸರ್ಕಾರಕ್ಕೆ ಮತ್ತೊಮ್ಮೆ ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಮನವಿ ಕೊಟ್ಟು ಸ್ಪಂದಿಸದಿದ್ದರೆ ಮುಂದಿನ ತೀರ್ಮಾನ ಘೋಷಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಬಜೆಟ್ನಲ್ಲಿ ಆರನೇ ವೇತನ ಆಯೋಗ ಪ್ರಸ್ತಾಪವಾಗದ ಕಾರಣ ಬೇಡಿಕೆ ಇಟ್ಟು ಮತ್ತೆ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಪ್ರಸ್ತುತ ಬೇಡಿಕೆಗಳು ಈಡೇರದಿದ್ದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಬೇಕು ಎಂಬುದನ್ನು ಪ್ರಮುಖವಾಗಿ ಇಟ್ಟುಕೊಂಡು ಮುಷ್ಕರ ಮಾಡಲಿದ್ದಾರೆ.
ಇನ್ನು ಮಾರ್ಚ್ 16ರ ನಂತರ ತಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ನಾವು ಸರ್ಕಾರಕ್ಕೆ ಮತ್ತೊಮ್ಮೆ ಸಾರಿಗೆ ನೌಕರರ ಬೇಡಿಕೆ ಈಡೆರಿಸುವ ಕುರಿತು ಮನವಿ ಮಾಡುತ್ತೇವೆ. ಅದಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಮಾ.16ರಂದು ಎಂದಿನಿಂದ ಮುಷ್ಕರ ನಡೆಸಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ನಾವು ಮುಷ್ಕರ ಮಾಡುವ ದಿನಾಂಕವನ್ನು ಘೋಷಣೆ ಮಾಡಿಲ್ಲ.
l ಕೋಡಿಹಳ್ಳಿ ಚಂದ್ರಶೇಖರ್ ಗೌರವ ಅಧ್ಯಕ್ಷ, ಸಾರಿಗೆ ನೌಕರರ ಒಕ್ಕೂಟ