ವಿಜಯಪಥ ಸಮಗ್ರ ಸುದ್ದಿ
ಹಾಸನ: ಜಿಲ್ಲೆಯ ತಿಮ್ಮಲಾಪುರದಲ್ಲಿ ತೆಗೆದುಕೊಂಡಿರುವ ಜಮೀನಿನಲ್ಲಿನ ರಸ್ತೆ ವಿಷಯವಾಗಿ ಗ್ರಾಮಸ್ಥರು ಮತ್ತು ಯಶ್ ಅವರ ಪೋಷಕರ ನಡುವೆ ಸೋಮವಾರ ನಡೆದ ಘರ್ಷಣೆ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ದುದ್ದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿದರು. ನಂತರ ತಮ್ಮವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೃಷಿ ಮಾಡುವ ದೃಷ್ಟಿಯಿಂದ ಭೂಮಿ ಖರೀದಿಸಿದ್ದೇವೆ. ಈಗ ಅದಕ್ಕೆ ಬೇಲಿ ಹಾಕಿ ಭದ್ರಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಗ್ರಾಮಸ್ಥರು ನೀವು ಬೇಲಿ ಹಾಕಬೇಡಿ. ನಾವು ತಿರುಗಾಡುವುದಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆ ಮಟ್ಟಿಲೇರಿದೆ.
ಈಹೀಗಾಗಿ ನಾನು ಆ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದು, ಆ ಸಮಸ್ಯೆಯನ್ನು ಗ್ರಾಮಸ್ಥರ ಮಧ್ಯೆಯೇ ಬಗೆಹರಿಸುತ್ತೇನೆ. ಗ್ರಾಮಸ್ಥರಿಗೆ ತೊಂದರೆ ಆಗದ ರೀತಿ ನಾನು ನೋಡಿಕೊಳ್ಳುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಇನ್ನು ಗ್ರಾಮದ ಕೆಲವರು ಮತ್ತು ನಮ್ಮ ತಂದೆ-ತಾಯಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕಾರಣ ಇಬ್ಬರು ಗ್ರಾಮೀಣರೆ ಅದರ ಬಗ್ಗೆ ನಾವು ಹೆಚ್ಚು ಕೆದಕಿ ದೊಡ್ಡದು ಮಾಡುವ ಬದಲು ಯಾವ ರೀತಿ ಒಳ್ಳೆಯದನ್ನು ಮಾಡಬೇಕು ಎಂಬುದರ ಕಡೆ ಗಮನಕೊಡೋಣ ಎಂದು ಹೇಳಿದರು.
ಇನ್ನು ಜನರಿಗೆ ತೊಂದರೆ ಕೊಟ್ಟು ಆ ಜಮೀನಿನಲ್ಲಿ ಕೃಷಿ ಮಾಡುವ ಆಸೆ ಇಲ್ಲ. ಜನರಿಗೆ ಒಳ್ಳೆಯದಾಗುವ ರೀತಿಯಲ್ಲಿ ಆ ಜಮೀನಿನಲ್ಲಿ ಗ್ರಾಮೀಣರ ಅದರಲ್ಲೂ ಬಡವರಿಗೆ ಒಳ್ಳೆಯದಾಗುವ ದೃಷ್ಟಿಯಲ್ಲೇ ವ್ಯವಸಾಯ ಮಾಡುವಂತೆ ನಮ್ಮ ಹುಡುಗರಿಗೆ ತಿಳಿಸುತ್ತೇನೆ. ಜತೆಗೆ ಯಾರಿಗೂ ತೊಂದರೆ ಕೊಡುವ ಮನಸ್ಥಿತಿಯವನು ನಾನಲ್ಲ ನಾನು ಜನರಿಗೆ ಒಳ್ಳೆಯದನ್ನೇ ಮಾಡಬೇಕು ಎಂದು ಬಯಸುವವನು ಎಂದು ಹೇಳಿದರು.
ಇನ್ನು ಮಾಧ್ಯಮಗಳಿಗೂ ಮನವಿ ಮಾಡಿದ ಅವರು ಸುಖಸುಮ್ಮನೆ ಏನೋ ಯಶ್ ಮಾಡಿಬಿಟ್ಟಿದ್ದಾರೆ. ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಚಾರ ಮಾಡಬೇಡಿ. ವಾಸ್ತವ ಸ್ಥಿತಿಯನ್ನು ತಿಳಿದು ವರದಿ ಮಾಡಿ. ಜನರಿಗೆ ಸತ್ಯ ತಿಳಿಸಿ ಎಂದು ಹೇಳಿದರು.