ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕದ ಪ್ರತಿಯೊಬ್ಬರ ಮೇಲೆ ಹೊರಿಸಿದ ಸಾಲ 70 ಸಾವಿರ ರೂ., ದೆಹಲಿಯ ಜನರ ಮೇಲೆ ಇರುವ ಸಾಲ ಕೇವಲ 10 ಸಾವಿರ ರೂ. ಇದು ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರ್ಕಾರದ ಸಾಧನೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿಗೆ ನೋಡುವುದಾದರೆ ಯಡಿಯೂರಪ್ಪ ಅವರು ಮಂಡಿಸಿರುವ ನಮ್ಮ ಕರ್ನಾಟಕ ಬಜೆಟ್‌ನಲ್ಲಿ ಯಾವುದೇ ದೂರ ದೃಷ್ಟಿ ಇಲ್ಲ, ಇಡೀ ರಾಜ್ಯವನ್ನು ಒಗ್ಗೂಡಿಸಿ ದೊಡ್ಡ ಶಕ್ತಿಯನ್ನಾಗಿಸುವ ಕಿಂಚಿತ್ತೂ ಅಂಶ ಕಾಣುವುದಿಲ್ಲ. ನಮ್ಮ ರಾಜ್ಯದ ಬಗೆಗಿರುವ ನಿಜವಾದ ಕಾಳಜಿಯನ್ನು ಈ ಬಜೆಟ್‌ನಲ್ಲಿ ಮೂಲೆಗುಂಪು ಮಾಡಲಾಗಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರ್ಕಾರ ಮಂಡಿಸಿರುವ ಬಜೆಟ್ “ದೇಶಭಕ್ತಿಯ ಬಜೆಟ್” ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
2047 ರಲ್ಲಿ ದೆಹಲಿ ಎಂದರೆ ಹೇಗಿರಬೇಕು ಎಂಬುದರ ದೃಷ್ಟಿಯೊಂದಿಗೆ ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ತಲಾ ಆದಾಯ 10 ಪಟ್ಟು ಬೆಳವಣಿಗೆ ಆಗಬೇಕು ಇದು ಸಿಂಗಾಪುರ ದೇಶದ ತಲಾ ಆದಾಯಕ್ಕೆ ಸಮನಾಗಿರಬೇಕು ಎನ್ನುವ ದೂರದೃಷ್ಟಿ ಇಲ್ಲಿದೆ. ಅಲ್ಲದೆ, 2048 ರ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡುವುದಕ್ಕೆ ಗುತ್ತಿಗೆ ಹರಾಜಿನಲ್ಲಿ ಭಾಗವಹಿಸುವಷ್ಟು ಮಹತ್ವಾಕಾಂಕ್ಷೆ ಆಪ್ ಸರ್ಕಾರಕ್ಕಿದೆ ಎಂದು ಹೇಳಿದರು.
ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ ಮಾತನಾಡಿ, 21-22ರ ಬಜೆಟ್ ವೆಚ್ಚದಲ್ಲಿ ಬೆಳವಣಿಗೆ ದೆಹಲಿ + 17% , ಕರ್ನಾಟಕ ಶೇ + 7.4% ಇದೆ. ದಿನಕ್ಕೆ 60,000 ಕ್ಕಿಂತ ಹೆಚ್ಚು ಲಸಿಕೆ ನೀಡುವ ಗುರಿ. ಆಸ್ಪತ್ರೆಯ ಹಾಸಿಗೆಗಳನ್ನು 14,000 ಹೆಚ್ಚಿಸುವುದು. ಪ್ರತಿ ವಾರ್ಡಿಗೆ ಒಂದರಂತೆ100 ಮಹಿಳಾ ಮೊಹಲ್ಲಾ ಕ್ಲಿನಿಕ್ ಗುರಿ. ಆರೋಗ್ಯಕ್ಕಾಗಿ 9,934 ಕೋಟಿ ರೂ ಮೀಸಲು. ಕರ್ನಾಟದಲ್ಲಿ ಆರೋಗ್ಯಕ್ಕಾಗಿ 11,900 ಕೋಟಿ ರೂ. ಒಟ್ಟು ಬಜೆಟ್‌ನ ಕೇವಲ ಶೇ 4.5% ಮಾತ್ರ ಮೀಸಲಿಟ್ಟಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಗುಣಮಟ್ಟದ 100 ಶಾಲೆಗಳು. ಶಿಕ್ಷಕರನ್ನು ವಿದೇಶಕ್ಕೆ ಉತ್ತಮ ತರಬೇತಿಗೆ ಕಳುಹಿಸುವುದು. ಶಿಕ್ಷಣಕ್ಕಾಗಿ ಬಜೆಟ್‌ನ ಸುಮಾರು ಶೇ. 25 (ರೂ. 16,377 ಕೋಟಿ!) ಖರ್ಚು. ಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಕೇವಲ ಶೇ.13 ಖರ್ಚು ಮಾಡಲಾಗಿದೆ (ರೂ. 29,300 ಕೋಟಿ). 1,00,000 ಶಿಕ್ಷಕರಿಗೆ ಶಿಕ್ಷಕ-ತರಬೇತಿಗಾಗಿ ಕೇವಲ 5 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ನೀತಿ ಮತ್ತು ಸಂಶೋಧನಾ ವಿಭಾಗದ ಪ್ರಕಾಶ್ ನೆಡುಂಗಡಿ ಮಾತನಾಡಿ, ಸ್ವಚ್ಛ, ಶುದ್ದ, ಸುರಕ್ಷಿತ ನೀರನ್ನು ಪೈಪ್‌ಲೈನ್ ಮೂಲಕ ಶೇ 93ರಷ್ಟು ಮನೆಗಳಿಗೆ ಉಚಿತವಾಗಿ ದೆಹಲಿಯಲ್ಲಿ ತಲುಪಿಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ 7,500 ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಲಾಗುತ್ತಿದೆ. ದೆಹಲಿಯಲ್ಲಿ 1.32 ಲಕ್ಷ ಕ್ಯಾಮರಾಗಳನ್ನು ಇಷ್ಟೇ ವೆಚ್ಚದಲ್ಲಿ ಈಗಾಗಲೇ ಅಳವಡಿಸಲಾಗಿದೆ. ಇದಲ್ಲದೆ, ಉಚಿತ ವಿದ್ಯುತ್ ಮತ್ತು ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ರಾಜ್ಯದ ಜನರಿಗೆ ಬಿಎಸ್‌ವೈ ಬೆಲೆ ಏರಿಕೆ ಬರೆ ಹಾಕುತ್ತಿದ್ದಾರೆ ಎಂದರು.
ದೆಹಲಿ: ಒಟ್ಟು 31,135 ಕೋಟಿ ರೂ.ಗಳ ಸಾಲ
ದೇಶದ ಜಿಎಸ್‌ಡಿಪಿಗೆ ಹೋಲಿಸಿದರೆ ದೇಶದ ಅತ್ಯಂತ ಕಡಿಮೆ ಸಾಲ ಹೊಂದಿರುವ ರಾಜ್ಯ; ಅಂದರೆ ತಲಾ ಸುಮಾರು 10,000 ರೂ ಮಾತ್ರ. ಕರ್ನಾಟಕದ ಸಾಲ 4,57,000 ಕೋಟಿ ರೂ. ಇದು ದೆಹಲಿಗಿಂತ 15 ಪಟ್ಟು ಹೆಚ್ಚಳ. ಕರ್ನಾಟಕದ ಪ್ರತಿಯೊಬ್ಬನ ತಲೆಯ ಮೇಲೆ ತಲಾ 70,000 ರೂಪಾಯಿ ಸಾಲ ಇದನ್ನು ನೋಡಿದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜನರಿಗೆ ಎಷ್ಟು ಹೊರೆ ಹೊರಿಸುತ್ತಿದೆ ಎಂಬುವುದು ತಿಳಿಯಲಿದೆ.l ಬಿ.ಟಿ.ನಾಗಣ್ಣ,ಉಪಾಧ್ಯಕ್ಷ, ಆಮ್ ಆದ್ಮಿ ಪಕ್ಷ, ಬೆಂಗಳೂರು
Super