ವಿಜಯಪಥ ಸಮಗ್ರ ಸುದ್ದಿ
ಬೀದರ್: ಜೆಡಿಎಸ್ ಹಿರಿಯ ನಾಯಕ ಪಿ.ಜಿ.ಆರ್ ಸಿಂಧ್ಯಾ ಕಾಂಗ್ರೆಸ್ ಪಕ್ಷ ಸೇರಿದರು.
ಬಸವ ಕಲ್ಯಾಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಂಧ್ಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಸವ ಕಲ್ಯಾಣ ಕ್ಷೇತ್ರಕ್ಕೆ ಏಪ್ರಿಲ್ ತಿಂಗಳು ಉಪ ಚುನಾವಣೆ ನಡೆಯಲಿದ್ದು, ರಾಜಕೀಯದಲ್ಲಿ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಮರಾಠ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸಿಂಧ್ಯಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಸುಮಾರು ನಾಲ್ಕೈದು ದಶಕಗಳಿಂದ ಜಾತ್ಯತೀತ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಪ್ರಗತಿಪರತೆಯ ನೆಲದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕೋಮುವಾದಿಗಳ ವಿರುದ್ಧ ಹೋರಾಡಿದವರಲ್ಲಿ ಒಬ್ಬರು.
ಈ ಹಿಂದೆ ಹೆಗಡೆ, ಜೆ.ಎಚ್.ಪಟೇಲ್, ದೇವೇಗೌಡರಂತ ಬೃಹತ್ ದಳಪತಿ ನಾಯಕರ ಸರ್ಕಾರದಲ್ಲಿ ಹಲವು ಖಾತೆಗಳ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಜನತಾ ದಳವು ಒಡೆದು ಹೋಳಾದಾಗ ದೇವೇಗೌಡರ ಬಣದಲ್ಲಿ ಗುರುತಿಸಿಕೊಂಡರೂ ಸಹ ಅಧಿಕಾರದಿಂದ ದೂರ ಸರಿದಿದ್ದರು.
ಈಗ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ, ಅವರಿಗೆ ಮುಂದೊಂದು ದಿನ ಸಕ್ರಿಯ ರಾಜಕಾರಣದಲ್ಲಿ ಯಶಸ್ಸು ಸಿಗುವ ಮೂಲಕ ಮತ್ತೆ ಅವರ ಸೇವೆ ನಾಡಿನ ಜನತೆಗೆ ಲಭಿಸುವಂತಾಗಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.