ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟವರನ್ನು ಊಳುವವರಿಲ್ಲ, ಇನ್ನು ಆಸ್ಪತ್ರೆಗೆ ದಾಖಲಾಗುವವರಿಗೆ ಜಾಗವಿಲ್ಲ, ವೆಂಟಿಲೇಟರ್ ಹಾಗೂ ಬೆಡ್ಗಳ ಕೊರತೆ. ಇದನ್ನುಸರಿಪಡಿಸಲಾಗದ ಈ ಸರ್ಕಾರಕ್ಕೆ ಹೇಳುವವರು, ಕೇಳುವವರೇ ಇಲ್ಲ ಎನ್ನುವಂತಾಗಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಆಡಳಿತ ಪಕ್ಷದವನಾಗಿದ್ದು ಇದನ್ನು ಹೇಳದೇ ಇದ್ದರೆ, ನನಗೆ ನಾನೇ ವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಲಾಕ್ಡೌನ್ ಮಾಡಬೇಕು ಎಂಬುದು ಎಲ್ಲರ ಅಭಿಪ್ರಾಯ. ಸುಖಾಸುಮ್ಮನೆ ಲಾಕ್ಡೌನ್ ಮಾಡುವುದಕ್ಕೆ ಆಗುವುದಿಲ್ಲ. ಜನತೆಗೆ ಅಗತ್ಯ ಸೌಲಭ್ಯ ಒದಗಿಸಿ ಲಾಕ್ಡೌನ್ ಮಾಡಬೇಕಾಗುತ್ತದೆ ಎಂದರು.
ಪ್ರತಿಯೊಂದಕ್ಕೂ ಸಿಎಂ ಬಳಿ ಹೋಗುವಂತಾಗಿದೆ. ಯಾವ ಸಚಿವರೂ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕೊಟ್ಟಿಲ್ಲ. ಯಾವ ಕಾಲದಲ್ಲೂ ಇಲ್ಲದಂತಹ ಆದೇಶ ಇದಾಗಿದೆ. ಯಾವ ಐಎಎಸ್ ಅಧಿಕಾರಿಗಳೂ ಸಚಿವರ ಮಾತು ಕೇಳುತ್ತಿಲ್ಲ. ಸಿಎಂ ಬರ್ತಾರೆ, ತೀರ್ಮಾನ ಮಾಡುತ್ತಾರೆ ಅಂತ ಸಚಿವರೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಹಾಗಿದ್ದರೆ ಸಂಪುಟದ ಸಚಿವರಾಗಿ ನೀವೇನು ಮಾಡುತ್ತಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿಗಳ ಹೆಲ್ತ್ಬುಲೆಟಿನ್ ರಾಜ್ಯದ ಜನರಿಗೆ ಗೊತ್ತಾಗಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಜ್ವರ, ಕೋವಿಡ್ ಇದ್ದರೂ ಚುನಾವಣೆ ಪ್ರಚಾರಕ್ಕೆ ಹೋದಿರಿ. ನಿಮ್ಮನ್ನು ಯಾರೂ ಎಚ್ಚರಿಸಲಿಲ್ಲವಾ? ಆರೋಗ್ಯ ಕಾಳಜಿ ಮುಖ್ಯಮಂತ್ರಿಗಳಿಂದ ಆಗಿಲ್ಲ. ಇದರಿಂದ ಸೋಂಕು ಹರಡಿತು. ಚುನಾವಣೆಗಳು ಕೊರೊನಾ ಕ್ಯಾರಿಯರ್ಸ್ ಆಗಿಬಿಟ್ಟವು. ಇದರ ಬಗ್ಗೆ ಯಾರೂ ಗಮನ ಹರಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನಲ್ ಸೆಂಟರ್ನಲ್ಲಿ 2 ಸಾವಿರ ಹಾಸಿಗೆಗಳನ್ನು ತರಿಸಿದ್ದೀರಿ, ಪವರ್ ರೂಮ್ ಮಾಡಿಸಿದ್ರಿ. ಇವೆಲ್ಲ ಏನಾಯಿತು. ಕೋವಿಡ್ ಎರಡನೇ ಅಲೆ ಬಗ್ಗೆ ತಜ್ಞರು ಎಚ್ಚರಿಸಿದಾಗ ಸರ್ಕಾರದವರು ಏನು ತಯಾರಿ ಮಾಡಿಕೊಂಡಿರಿ? ಜನರಿಗೆ ಕೊಡಬೇಕಾದ ಆರೋಗ್ಯ ಒದಗಿಸುವಲ್ಲಿ ನಾಯಕತ್ವ ಸೋತಿದೆ ಎಂದು ಹೇಳಿದರು.
ಮುಖ್ಯಮಂತ್ರಿ, ಸಚಿವರು, ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿ, ಇಂದು ಪರಿಸ್ಥಿತಿ ಹದಗೆಟ್ಟಿದೆ. ಸರ್ಕಾರ ವೈಪರಿತ್ಯ ತಡೆಗಟ್ಟುವಲ್ಲಿ ವಿಫಲ ಆಗುತ್ತಿದೆ ಎಂದು ಜನರು ಭಾವಿಸುತ್ತಿದ್ದಾರೆ. ನಾಲ್ಕು ತಿಂಗಳು ಸುಮ್ಮನೆ ಕೂತು, ಈಗ ಇದ್ದಕ್ಕಿದ್ದಂತೆ ಓಡಾಡುತ್ತಿರುವುದು ಸರ್ಕಾರದ ಬೇಜವಾಬ್ದಾರಿ ಆಗಿದೆ. ಜನರಿಂದ ಸೋಂಕು ಹರಡುತ್ತಿದೆ ಎನ್ನುವುದು ಬೇಜವಾಬ್ದಾರಿಯ ಮಾತು ಎಂದು ಟೀಕಿಸಿದರು.