ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ರಸಗೊಬ್ಬರ ಮಾರಾಟ ಮಾಡಲು ಪರಾವನಗಿ ಹೊಂದಿರುವ ಖಾಸಗಿ ಮಾರಾಟಗಾಗರರು ರಸಗೊಬ್ಬರಗಳನ್ನು ಚೀಲದ ಮೇಲೆ ಮುದ್ರಿತ ಮಾರಾಟ ದರದಲ್ಲೇ ಮಾರಾಟ ಮಾಡಬೇಕು ತಪ್ಪಿದ್ದಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ.ಶಿವಕುಮಾರ್ ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಪಾಸ್ಫಾರಿಕ್ ಆಸಿಡ್ ದರವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಮಾರಾಟ ದರವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು ಹಾಗು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಈಗಾಗಲೇ ದಾಸ್ತಾನು ಮಾಡಲಾಗಿರುವ ಹೊಸ ದಾಸ್ತಾನು ಪಡೆದಿರುವ ರಸಗೊಬ್ಬರ ಮಾರಾಟಗಾರರು ಹೊಸ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಆದರೆ ಚೀಲದ ಮೇಲೆ ಮುದ್ರಿತ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಯನ್ನು ಪಡೆಯುವಂತಿಲ್ಲ.
ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಟ್ಟುನಿಟ್ಟಿನ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ರಸಗೊಬ್ಬರ ಖರೀದಿಗೆ ಬರುವ ರೈತರಿಗೆ ಮಾರಾಟಗಾರರು ಹಾಗೂ ಸಹಕಾರ ಸಂಘಗಳು ಮಾಸ್ಕ್ ಮತ್ತು ಸ್ಯಾನೀಟೈಸರ್ ಗಳನ್ನು ನೀಡುವ ಮೂಲಕ ಕೋವಿಡ್-19 ಹತೋಟಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
ಮೇ ನಲ್ಲಿ ಬತ್ತನೆಬೀಜ ವಿತರಣೆ
ಈಗಾಗಲೇ ತಾಲೂಕಿನಲ್ಲಿ ಪೂರ್ವ ಮುಂಗಾರು ಆರಂಭವಾಗಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು, 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 800 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ದ್ವಿದಳ ದಾನ್ಯಗಳನ್ನು ಬೆಳೆಯುವ ಸಂಭವವಿದ್ದು, ಅಗತ್ಯತೆಗೆ ತಕ್ಕಂತೆ ಮೇ ಮೊದಲ ವಾರದಲ್ಲಿ ಮುಸುಕಿನ ಜೋಳ, ಬಿತ್ತನೆಬೀಜ, ಕೀಟನಾಶಕ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ
ಪ್ರಸ್ತುತ ರಾಜ್ಯಾದ್ಯಂತ ಕೋವಿಡ್ 2ನೇ ಅಲೆ ಆರಂಭವಾಗಿದ್ದು ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಪರಿಕರಗಳ ಖರೀದಿಗಾಗಿ ನಗರ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ರಸಗೊಬ್ಬರ ಮಾರಾಟಗಾರರು ಹಾಗೂ ಸಹಕಾರ ಸಂಘಗಳಲ್ಲಿ ರೈತರಿಗೆ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಹಾಗೂ ಮಾರಾಟ ಮಳಿಗೆಯಲ್ಲಿ ಕೈ ತೊಳೆಯಲು ಮತ್ತು ಸ್ಯಾನಿಟೈಸರ್ ಬಳಕೆಗೆ ಲಭ್ಯವಿರುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಮಾಹಿತಿ ನೀಡಲು ತಿಳಿಸಿದ್ದಾರೆ.