ವಿಜಯಪಥ ಸಮಗ್ರ ಸುದ್ದಿ
ಹುಣಸೂರು: ಜಮೀನು ವಿವಾದಕ್ಕೆ ಆರಂಭವಾದ ಜಗಳದಲ್ಲಿ ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕು ಹೊನ್ನೇನಹಳ್ಳಿ ಗ್ರಾಮದ ಹೈರಿಗೆ ಬಳಿ ಘಟನೆ ನಡೆದಿದ್ದು, ಗ್ರಾಮದ ಚಂದ್ರಶೆಟ್ಟಿ ಹಾಗೂ ಮಹದೇವಮ್ಮ ಹಲ್ಲೆಯಿಂದ ಗಾಯಗೊಂಡ ವೃದ್ಧ ದಂಪತಿ.
ಹಲ್ಲೆಗೊಳಗಾದ ದಂಪತಿಗೆ ಕೊರೊನಾ ಹಿನ್ನೆಲೆ ಹುಣಸೂರಿನಲ್ಲಿ ಚಿಕಿತ್ಸೆ ಲಭ್ಯವಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲವು ವರ್ಷಗಳಿಂದ ಎರಡು ಎಕರೆ ಜಮೀನಿಗಾಗಿ ಚಂದ್ರಶೆಟ್ಟಿ ಹಾಗೂ ಕಾಳೇಗೌಡ ಎಂಬುವರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಸದ್ಯ ವಿವಾದ ನ್ಯಾಯಾಲಯದಲ್ಲಿದ್ದು, ಈ ನಡುವೆ ಮತ್ತೆ ಗಲಾಟೆ ನಡೆದಿದೆ.
ಜಮೀನು ವಿಚಾರವಾಗಿ ಈ ಹಿಂದೆ ಹಲವು ಬಾರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದ ಕಾಳೇಗೌಡ ಕುಟುಂಬದವರು, ಮಹದೇವಮ್ಮ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಯತ್ನವನ್ನೂ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇನ್ನು ಶನಿವಾರ ಜಮೀನು ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಕಾಳೇಗೌಡ ಕುಟುಂಬದವರು, ದಂಪತಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಕಾಳೇಗೌಡ, ರಾಕೇಶ್, ದೇವರಾಜ್, ರಾಮ್ ಸೇರಿದಂತೆ ಹಲವರ ವಿರುದ್ಧ ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀರು ಮುಂದಿನ ಕ್ರಮ ಜರುಗಿಸಿದ್ದಾರೆ.