ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ಡೌನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇದರ ನಡುವಲ್ಲೇ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ರಾಜ್ಯ ಸರ್ಕಾರ ಇಂದು ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ, ಮಹಿಳಾ ಸ್ವಸಹಾಯ ಸಂಘಗಳ ಸಾಲ ಹಾಗೂ ರೈತರ ಬೆಳೆ ಸಾಲದ ಕಂತಿನ ಮರುಪಾವತಿ ವಿಸ್ತರಣೆ ಮತ್ತಿತರ ನೆರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪ್ರಕಟಿಸುವ ಸಾಧ್ಯತೆಗಳಿವೆ. ಆದರೆ, ಯಾರಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂಬುದರ ಬಗ್ಗೆ ತಮ್ಮ ಸಂಪುಟದ ಹಿರಿಯ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳಿಸುವ ಸಾಧ್ಯತೆ ಇದೆ.
ಈ ಸಂಬಂಧ ಮಂಗಳವಾರ ಸಂಜೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದ ಮುಖ್ಯಮಂತ್ರಿ ಅವರು, ಸುದೀರ್ಘ ಚರ್ಚೆ ನಡೆಸಿದ್ದಾರೆ. ಇಂದು ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕಳೆದ ಬಾರಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದುದ್ದರಿಂದ ಹೆಚ್ಚಿನ ವರ್ಗಗಳಿಗೆ ಸುಮಾರು ಎರಡೂವರೆ ಕೋಟಿ ರುಪಾಯಿಗಳಷ್ಟು ಪರಿಹಾರ ಘೋಷಿಸಲಾಗಿತ್ತು. ಆದರೆ, ಈಗ ಪೂರ್ಣ ಲಾಕ್ಡೌನ್ ಜಾರಿಯಲ್ಲಿ ಇಲ್ಲ. ಸೆಮಿ ಲಾಕ್ಡೌನ್ ಇದೆ. ಹೀಗಾಗಿ ಎಲ್ಲಾ ವರ್ಗಗಳಿಗೂ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ಸರ್ಕಾರ ಪರೋಕ್ಷವಾಗಿ ಹೇಳಿಕೊಂಡು ಬಂದಿತ್ತು.
ಪ್ರಸ್ತುತ ಕೋವಿಡ್‌ನ ಮೊದಲ ಅಲೆಯಿಂದ ಆರ್ಥಿಕತೆ ಮೇಲಾಗಿರುವ ಹೊಡೆತದಿಂದ ಇನ್ನೂ ಸಾಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅಗತ್ಯವಿರುವ ವರ್ಗಗಳಿಗೆ ಮಾತ್ರ ಪರಿಹಾರ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಮುಖ್ಯಮಂತ್ರಿಗಳು ಬುಧವಾರ ಬೆಳಗ್ಗೆ ಆರ್ಥಿಕ ಅಧಿಕಾರಿಗಳ ಅಭಿಪ್ರಾಯವನ್ನು ಸಚಿವರ ಸಭೆಯಲ್ಲಿ ಇರಿಸಿ ಚರ್ಚಿಸಲಿದ್ದಾರೆ. ನಂತರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಜತೆಗೆ ಲಾಕ್‌ಡೌನ್ ಒಂದು ವಾರನಾ ಅಥವಾ ಇನ್ನೂ ಎರಡು ವಾರ ಮಾಡಲಾಗುತ್ತದೆಯೇ ಎಂಬುದು ಇಂದೇ ನಿರ್ಧಾರವಾಗುವ ಸಾಧ್ಯತೆಯೂ ಇದೆ.