ಶಾಲೆಗಳಲ್ಲಿ ಪ್ರತಿವಾರ ಸ್ಯಾನಿಟೈಜರ್ ಕಡ್ಡಾಯ : ವಸತಿ ಶಿಕ್ಷಣ ಸಂಸ್ಥೆ ನಿರ್ದೇಶಕ ಶಿವಾನಂದ
ಬಾಗಲಕೋಟೆ : ಕೋವಿಡ್ ಮೂರನೇ ಅಲೆ ಭೀತಿ ಇರುವುದರಿಂದ ವಸತಿ ಶಾಲೆಗಳು ಪ್ರತಿವಾರ ಸ್ಯಾನಿಟೈಸರ್ ಆಗಬೇಕಾಗಿರುವುದು ಕಡ್ಡಾಯ. ಈ ಕುರಿತು ಪ್ರಾಂಶುಪಾಲರು ಮತ್ತು ನಿಲಯ ಪಾಲಕರು ನಿಗಾವಹಿಸಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗದ ನಿರ್ದೇಶಕ ಶಿವಾನಂದ ಕುಂಬಾರ ತಿಳಿಸಿದ್ದಾರೆ.
ನವನಗರದ ಮುಚಖಂಡಿ ಮೊರಾರ್ಜಿ ಪದವಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಯ ವಸತಿ ಶಾಲೆ ಪ್ರಾಂಶುಪಾಲರು ಮತ್ತು ನಿಲಯ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲರು, ಶಿಕ್ಷಕರು ಮತ್ತು ನಿಲಯಪಾಲಕರು ಪರಸ್ಪರ ಸಹಕಾರದಿಂದ ವಸತಿ ಶಾಲೆಯ ಆವರಣವನ್ನು ನಿತ್ಯ ಶುಚಿಯಾಗಿಟ್ಟುಕೊಳ್ಳಬೇಕು ತಿಳಿಸಿದರು.
ಶಿಕ್ಷಕರು ನಿತ್ಯ ಶಾಲೆಯಿಂದ ಮನೆಗೆ ತೆರಳುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶೌಚಾಲಯ, ಸ್ನಾನದ ಕೋಣೆ ಹಾಗೂ ಆಟದ ಮೈದಾನ ನಿತ್ಯ ಶುದ್ಧವಾಗಿರುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ.
ಮೊರಾರ್ಜಿ ಶಾಲೆಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಫಲಿತಾಂಶ ತಮ್ಮಿಂದ ನಿರೀಕ್ಷಿಸುತ್ತಿದ್ದೇವೆ. ಆಂಗ್ಲ ಮಾಧ್ಯಮ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮಾತಾಡುವ ಕೌಶಲ್ಯವನ್ನು ಶಿಕ್ಷಕರು ಬೆಳೆಸಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಮಾತನಾಡಿ, ವಸತಿ ಶಾಲೆಯಲ್ಲಿ ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳ ಸ್ವಚ್ಛತೆಯ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಆರೋಗ್ಯದ ಕಡೆ ಹೆಚ್ಚು ನಿಗಾ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಿವಾನಂದ ಕುಂಬಾರ ಅವರನ್ನು ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲರು ಮತ್ತು ಶಿಕ್ಷಕರ, ನಿಲಯಪಾಲಕರ ಅಹವಾಲುಗಳನ್ನು ಸ್ವೀಕರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡೊಂಬರ, ಪ್ರಾಂಶುಪಾಲ ಭಾರತಿ ಸಜ್ಜನ, ಜಿಲ್ಲಾ ಸಮನ್ವಯಾಧಿಕಾರಿ ವಿಲಾಸ ಅಕ್ಕಿಮರಡಿ, ಸತೀಶ ಸಜ್ಜನ, ಲಕ್ಷ್ಮಣ ಎ. ಬಿರಾದಾರ, ಹರೀಶ ಹೊಸಮನಿ ,ಎಸ್ ಜಿ ಹಿರೇಮಠ, ಅಮರೇಶ ಬೆಳ್ಳಿಹಾಳ ಉಪಸ್ಥಿತರಿದ್ದರು.
ಶಿಕ್ಷಕ ಶಿವಾನಂದ ನಂದೆಪ್ಪಗೋಳ ನಿರೂಪಿಸಿದರು. ರವೀಂದ್ರ ಬಂಥನಾಳ ಸ್ವಾಗತಿಸಿದರು. ಬಿ.ವೈ.ಕ್ವಾಟಿ ಪ್ರಾಸ್ತಾವಿಕ ನುಡಿದರು. ಮಂಜುನಾಥ ಅಂಗಡಿ ವಂದಿಸಿದರು. ಸಭೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಮತ್ತು ನಿಲಯ ಪಾಲಕರು ಭಾಗವಹಿಸಿದ್ದರು.