ಬೆಂಗಳೂರು: ಕೊರೊನಾ ಆತಂಕ ಹಿನ್ನೆಲೆ ಈ ಬಾರಿಯೂ ಸರಳ, ಸಾಂಪ್ರದಾಯಿಕ ಮೈಸೂರು ದಸರಾ ಆಚರಣೆಗೆ ಸರ್ಕಾರ ತೀರ್ಮಾನಿಸಿದೆ.
ನಾಡಹಬ್ಬ ಮೈಸೂರು ದಸರಾ ಆಚರಣೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕಳೆದ ಬಾರಿ ಸಾಂಪ್ರದಾಯಿಕ, ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಕೂಡ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ.
ದಸರಾ ಆಚರಣೆ ವೇಳೆ ಆರ್ಥಿಕ ಚಟುವಟಿಕೆಗಳು ಆಗುತ್ತಿದ್ದವು. ಆದರೆ ಕೋವಿಡ್ನಿಂದಾಗಿ ಅಲ್ಲಿ ಸಮಸ್ಯೆ ಆಗಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಂಬಂಧ ಆಲೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಕ್ಟೋಬರ್ 7ರಂದು ಮೈಸೂರು ದಸರಾ ಉದ್ಘಾಟನೆ ಆಗಲಿದೆ. ಅಕ್ಟೋಬರ್ 15 ರಂದು ಮಧ್ಯಾಹ್ನ ಜಂಬೂ ಸವಾರಿ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಆವರಣದ ಒಳಗಡೆ ಜಂಬೂ ಸವಾರಿ ನಡೆಯಲಿದೆ ಎಂದು ಸಿಎಂ ಹೇಳಿದರು.
ಮೈಸೂರು ದಸರಾಗೆ ಈ ಬಾರಿ ಆರು ಕೋಟಿ ರೂ. ನಿಗದಿ ಮಾಡಲಾಗಿದೆ. ಕೊಟ್ಟಿರುವ ಹಣದಲ್ಲೇ ಅವರು ಖರ್ಚು ಮಾಡಬೇಕು. ಅದಕ್ಕಿಂತ ಜಾಸ್ತಿ ಆಗಬಾರದು ಎಂದು ತೀರ್ಮಾನಿಸಿರುವುದಾಗಿದೆ ವಿವರಿಸಿದರು.